ಚಿಕ್ಕಮಗಳೂರು: ಕೇಂದ್ರ ಪ್ರಯೋಜಿತ ಯೋಜನೆಗಳ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವುದರೊಂದಿಗೆ ಪ್ರತಿಶತ ನೂರರಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮುಂದಾಗಬೇಕೆಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯೆ, ಶೋಭ ಕರಂದ್ಲಾಜೆ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುವುದರೊಂದಿಗೆ ಸಾಕಷ್ಟು ಅನುದಾನವನ್ನು ನೀಡಲಾಗಿದ್ದು ಇದನ್ನು ಸಾರ್ವಜನಿಕಾರಿಗೆ ಶೇಕಡ ನೂರರಷ್ಟು ತಲುಪಿಸುವ ಕೆಲಸ ಅಧಿಕಾರಿಗಳು ಚಾಚುತಪ್ಪದೆ ಮಾಡಬೇಕು ಎಂದರು. ಸಾರ್ವಜನಿಕರಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕೇಂದ್ರ ಸರ್ಕಾರ ಕನಸಿನ ಯೋಜನೆಗಳಲ್ಲಿ ಒಂದಾದ ಅಮೃತ್ ಯೋಜನೆಯ ಅನುಷ್ಠನಕ್ಕೆ ಅಗತ್ಯ ಇರುವ ಭೂಮಿಯನ್ನು ಪಡೆಯುವುದರೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು.
ಅದಷ್ಟು ಶೀಘ್ರದಲ್ಲಿ ಅಮೃತ್ ಯೋಜನೆಯ ಮಾನಿಟರಿಂಗ್ ಸಮಿತಿಯನ್ನು ರಚನೆ ಮಾಡಬೇಕು ಎಂದವರು ಈ ಯೋಜನೆಯ ಅನುಷ್ಠಾನಕ್ಕೆ ಇತರೆ ಇಲಾಖೆಗಳೊಂದಿಗೆ ಸಮನ್ಚಯದೊಂದಿಗೆ ಕೆಲಸ ಮಾಡಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ಬರದ ಛಾಯೆ ಅವರಿಸಿದೆ ಇದರಿಂದಾಗಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಅನೇಕ ಗ್ರಾಮಗಳಲ್ಲಿ ಉಂಟಾಗಿದೆ ಕುಡಿಯುವ ನೀರನ್ನು ವಾರಕೊಮ್ಮೆ ಎರಡು ನೂರು ಲೀಟರ್ ಕೊಡುವ ಬದಲಿಗೆ ಮೂರು ದಿನಗಳಿಗೊಮ್ಮೆ ನೀಡಬೇಕು. ಗೋಶಾಲೆಗಳ ಅಗತ್ಯ ಇರುವ ಕಡೆ ತಕ್ಷಣದಲ್ಲಿ ತೆರೆಯಬೇಕು ರೈತರು ಜನುವಾರುಗಳನ್ನು ಮಾರಿಕೊಂಡ ನಂತರ ಯಾವುದೇ ಪ್ರಯೋಜನವಾಗುವುದಿಲ್ಲ ಎಂದವರು ಮುಂದಿನ ಒಂದುವರೆ ತಿಂಗಳವರೆಗೆ ಮೇವು ಬ್ಯಾಂಕ್ ಗಳ ಮೂಲಕ ಮೇವು ವಿತರಣೆಗೆ ಅಗತ್ಯ ಕ್ರಮವಹಿಸಬೇಕು ಎಂದು ನುಡಿದರು.