ಶ್ರೀಮಂಗಲ: ಶ್ರೀಮಂಗಲ ಆರಕ್ಷಕ ಠಾಣಾ ವ್ಯಾಪ್ತಿಯ ಬಲ್ಯಮುಂಡೂರು ಗ್ರಾಮದ ಕೊಡ್ಚಿ ನಿವಾಸಿ ರಾಜುರವರ ಪುತ್ರ ಗಿರೀಶ್(25) ಎಂಬುವವನನ್ನು ಬುಧವಾರ ರಾತ್ರಿ 9.10 ಗಂಟೆಗೆ ಅಪರಿಚಿತರು ಅಪಹರಣ ಮಾಡಿರುವ ಬಗ್ಗೆ ಶ್ರೀಮಂಗಲ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಲ್ಯಮುಂಡೂರು ಗ್ರಾಮ, ಕೊಡ್ಚಿ ನಿವಾಸಿ ಬೋವಿ ಜನಾಂಗದ ರಾಜು ರವರ ಇಬ್ಬರು ಪುತ್ರರಾದ ಗಿರೀಶ ಹಾಗೂ ಗಣೇಶ ಇಬ್ಬರು ತಮ್ಮ ಮೋಟಾರು ಬೈಕ್ ನಲ್ಲಿ ಸಮೀಪದ ಪಟ್ಟಣದಿಂದ ಹಿಂದಿರುಗಿ ಬರುತ್ತಿದ್ದಾಗ ರಾತ್ರಿ 9.10 ಗಂಟೆಗೆ ಕೊಡ್ಚಿ ಎಂಬಲ್ಲಿ ಡಸ್ಟರ್ ಹಾಗೂ ಓಮ್ನಿ ವಾಹನದಲ್ಲಿ ಬಂದಿದ್ದ 7 ಜನ ಅಪರಿಚಿತರು ಬೈಕನ್ನು ಅಡ್ಡಗಟ್ಟಿ ಗಿರೀಶ ಹಾಗೂ ಗಣೇಶ ಇಬ್ಬರ ಮೇಲೆ ಮೆಣಸಿನ ಪುಡಿ ಎರಚಿ ಗಿರೀಶನನ್ನು ಡಸ್ಟರ್ ಕಾರ್ ನಲ್ಲಿ ಬಲತ್ಕಾರವಾಗಿ ಕೂರಿಸಿಕೊಂಡು ಪರಾರಿಯಾಗಿದ್ದಾರೆ. ತಾನು ಸ್ಥಳದಿಂದ ಓಡಿ ತಪ್ಪಿಸಿಕೊಂಡಿರುತ್ತೇನೆಂದು ಗಿರೀಶನ ಸೋದರ ಗಣೇಶ ಶ್ರೀಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಆಸ್ತಿ ವೈಷಮ್ಯದ ಹಿನ್ನಲೆಯಲ್ಲಿ ತನ್ನ ದೊಡ್ಡಪ್ಪ ಸಿದ್ದಯ್ಯ ಹಾಗೂ ಅವರ ಮಗ ಸುರೇಶ ಎಂಬವರು ಈ ಕೃತ್ಯವೆಸಗಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದು, ಸಿದ್ದಯ್ಯ ಹಾಗೂ ಸುರೇಶ ಸೇರಿದಂತೆ ಹಲವರ ವಿರುದ್ಧ ಸಂಶಯಾಧಾರಿತ ದೂರು ದಾಖಲಿಸಿದ್ದು, ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈಗಾಗಲೆ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ರಾಜೇಂದ್ರ ಪ್ರಸಾದ್ರವರ ನಿರ್ದೇಶನದಂತೆ ವಿರಾಜಪೇಟೆ ತಾಲ್ಲೂಕು ಡಿ.ವೈ.ಎಸ್ಪಿ ನಾಗಪ್ಪರವರ ಮುಂದಾಳತ್ವದಲ್ಲಿ ಅಪಹರಣ ಪ್ರಕರಣವನ್ನು ಬೇದಿಸಲು ಪ್ರತ್ಯೇಕ ಪೋಲಿಸ್ ತಂಡ ರಚಿಸಿದ್ದು, ಪತ್ತೆಹಚ್ಚುವ ಕಾರ್ಯ ಮುಂದುವರೆದಿದೆ. ಮೊಬೈಲ್ ಟವರ್ ಆದರಿಸಿ ನಡೆಸಿದ ಶೋಧ ಕಾರ್ಯದಲ್ಲಿ ಮಡಿಕೇರಿ, ಸುಂಟಿಕೊಪ್ಪ, ಇಬ್ನಿವಳವಾಡಿ ಮಾರ್ಗದಲ್ಲಿ ಸಂಚರಿಸಿದ ಸುಳಿವು ಸಿಕ್ಕಿದ್ದು ಮುಂದಿನ ಕಾರ್ಯಾಚರಣೆ ನಡೆಯುತ್ತಿದೆ ಎಂದು ಶ್ರೀಮಂಗಲ ಪೋಲಿಸ್ ಠಾಣಾಧಿಕಾರಿ ಮಾಹಿತಿ ನೀಡಿದ್ದಾರೆ.