ರಾಮನಗರ: ಅರತಕ್ಷತೆ ವೇಳೆ ವಧು ಆಕಸ್ಮಿಕವಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದ ವಿವಾಹವೇ ರದ್ದುಗೊಂಡ ಘಟನೆ ರಾಮನಗರದಲ್ಲಿ ಗುರುವಾರ ನಡೆದಿದೆ.
ವಧು ಮೂರ್ಛೆ(ಪಿಟ್ಸ್)ರೋಗದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎಂದು ಆರೋಪಿಸಿರುವ ವರ ವಿವಾಹಕ್ಕೆ ಒಪ್ಪದರಿಂದ ಬೇರೆ ದಾರಿ ಕಾಣದೆ ನಿಲ್ಲಿಸಲಾಗಿದೆ. ನಗರದ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ಕುಣಿಗಲ್ ತಾಲೂಕಿನ ಹೊಸದೊಡ್ಡಿ ಗ್ರಾಮದ ಪ್ರದೀಪ್ ಕುಮಾರ್ ಮತ್ತು ರಾಮನಗರದ ಕುಮಾರಸ್ವಾಮಿ ಬಡಾವಣೆಯ ಎಂ.ಸಿ.ಎ ಪದವೀಧರೆ ಚೈತ್ರಾ ಎಂಬುವರ ನಡುವೆ ವಿವಾಹ ಬುಧವಾರ ಮತ್ತು ಗುರುವಾರ ಏರ್ಪಾಡಾಗಿತ್ತು.
ವಿವಾಹದ ಹಿನ್ನಲೆಯಲ್ಲಿ ಎಲ್ಲ ರೀತಿಯ ಶಾಸ್ತ್ರಗಳು ನಡೆದಿತ್ತಲ್ಲದೆ, ಬುಧವಾರ ರಾತ್ರಿ ಆರತಕ್ಷತೆಯೂ ಮುಗಿದಿತ್ತು. ವಧು ಎತ್ತರ ಕಾಣಲಿ ಎಂಬ ಉದ್ದೇಶದಿಂದ ಕಾಲಿಗೆ ಹೀಲ್ಡ್ ಚಪ್ಪಲಿ ಹಾಕಲಾಗಿತ್ತು. ಜತೆಗೆ ಬೆಳಗ್ಗಿನಿಂದಲೂ ಶಾಸ್ತ್ರ ಇನ್ನಿತರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರಿಂದ ಸರಿಯಾಗಿ ಊಟ ಮಾಡಿರಲಿಲ್ಲ ಎನ್ನಲಾಗಿದೆ. ಈ ಮಧ್ಯೆ ಫೋಟೋ ಮತ್ತು ವೀಡಿಯೋ ಬೆಳಕು ಕಣ್ಣು ಕುಕ್ಕುತ್ತಿತ್ತು. ಬುಧವಾರ ಸಂಜೆ 7ಕ್ಕೆ ಆರಂಭವಾದ ಆರತಕ್ಷತೆ ರಾತ್ರಿ 10 ಗಂಟೆಯವರೆಗೂ ಮುಂದುವರಿದಿತ್ತು.
ಸುಮಾರು 3 ಗಂಟೆಗೂ ಹೆಚ್ಚು ಕಾಲ ನಿಂತಿದ್ದರಿಂದ ಹಾಗೂ ಉಪವಾಸವಿದ್ದ ಕಾರಣ ವಧು ಚೈತ್ರಾ ನಿತ್ರಾಣಗೊಂಡು, ಕಾಲು ಜೋಮು ಹಿಡಿದು ಕುಸಿದು ಬಿದ್ದಿದ್ದಾರೆ. ಈ ವೇಳೆ ತಲೆಗೆ ಪೆಟ್ಟಾಗಿ ಪ್ರಜ್ಞೆ ತಪ್ಪಿದೆ. ತಕ್ಷಣ ಆಕೆಯನ್ನು ಉಪಚರಿಸಿದ್ದರಿಂದ ಹುಷಾರಾಗಿದ್ದಾಳೆ ಆದರೆ, ಚೈತ್ರಳಿಗೆ ಮೂರ್ಛೇ ರೋಗವಿದೆ ಎಂದು ತಪ್ಪಾಗಿ ಭಾವಿಸಿದ ವರ ಪ್ರದೀಪ್ ಕುಮಾರ್ ನನಗೆ ಆ ಹುಡುಗಿ ಜೊತೆ ಮದುವೆಯೇ ಬೇಡವೆಂದು ತಗಾದೆ ತೆಗೆದಿದ್ದಾನೆ.
ಗುರುವಾರ ಬೆಳಿಗ್ಗೆ ಮದುವೆಗೆಂದು ವಧು ಹಾಗೂ ವರನ ಕಡೆಯ ಸಂಬಂಧಿಕರು ಹಾಗೂ ಗಣ್ಯರು ಆಗಮಿಸಿದ್ದರು, ಆದರೆ ನನಗೆ ಆತ ಮಾತ್ರ ಆ ಹುಡುಗಿ ಬೇಡವೇ ಬೇಡ ಎಂದು ಹೇಳಿದ್ದರಿಂದ ಮದುವೆಗೆ ಬಂದವರು ಹುಡುಗನ ಮನಪರಿವರ್ತಿಸುವ ಕೆಲಸ ಮಾಡಿದ್ದಾರೆ. ಆದರೆ ಅದಕ್ಕೆ ಹುಡುಗ ಸುತರಾಂ ಒಪ್ಪಲಿಲ್ಲ. ಜತೆಗೆ ಬಹಳ ಹೊತ್ತಿನವರೆಗೆ ಕಲ್ಯಾಣ ಮಂಟಪದ ಕಡೆಗೆ ತಲೆ ಹಾಕಿರಲಿಲ್ಲ, ವಿಷಯ ತಿಳಿದ ಕೆಲವು ಗಣ್ಯರು ಕ್ಷುಲ್ಲಕ ಕಾರಣಕ್ಕೆ ಮುರಿದುಹೋಗುತ್ತಿರುವ ಮದುವೆಯನ್ನು ಹೇಗಾದರೂ ರಾಜೀ ಸಂಧಾನ ಮಾಡಲು ಮುಂದಾದರೂ ಪ್ರಯೋಜನವಾಗಲಿಲ್ಲ.
ವಧುವಿನ ಸಹೋದರಿಯನ್ನೇ ಕೇಳಿದ ವರ:
ಬಿಡದಿಯ ಟೊಯೋಟಾ ಮೋಟಾರ್ಸ್ ಕಂಪೆನಿಯಲ್ಲಿ ನೌಕರನಾಗಿರುವ ಪ್ರದೀಪ್ ಕುಮಾರನಿಗೆ ರಾಮನಗರದ ಪ್ರತಿಷ್ಠಿತ ಬಡಾವಣೆಯಲ್ಲಿ ನಿವೇಶನ, 200 ಗ್ರಾಂ.ಗೂ ಹೆಚ್ಚು ಚಿನ್ನಾಭರಣವನ್ನು ವರೋಪಚಾರವಾಗಿ ನೀಡಲಾಗಿತ್ತು. ಇದರ ಹೊರತಾಗಿಯೂ ಹೆಚ್ಚುವರಿಯಾಗಿ 10 ಲಕ್ಷ ನೀಡಿದರೆ ಮದುವೆ ಮಾಡಿಕೊಳ್ಳುತ್ತೇನೆ. ಇಲ್ಲವೇ ವಧುವಿನ ಸಹೋದರಿಯನ್ನು ಮದುವೆ ಮಾಡಿಕೊಡಿ ಎಂದು ಬೇಡಿಕೆ ಇಟ್ಟಿದ್ದ ಎಂಬುದು ವಧುವಿನ ಕಡೆಯವರ ಆರೋಪವಾಗಿದೆ.
ಕುಂಟುನೆಪ ಹೇಳಿ ವಧುವನ್ನು ತಿರಸ್ಕರಿಸಿ, ಮದುವೆ ಮನೆಯಲ್ಲಿಯೇ ಹೆಚ್ಚುವರಿ ವರದಕ್ಷಿಣೆ ಹಣಕ್ಕೆ ಬೇಡಿಕೆ ಇಟ್ಟಿರುವ ಇಂತಹ ನೀತಿ ಗೆಟ್ಟವನಿಗೆ ಯಾವುದೇ ಕಾರಣಕ್ಕೂ ನಾವು ಮಗಳನ್ನು ನೀಡುವುದಿಲ್ಲ. ಮದುವೆಗೆಂದು ಖರ್ಚು ಮಾಡಿರುವ ಹಣವನ್ನು ವಾಪಸ್ ಕೊಡಿಸಿ ಎಂದು ವಧುವಿನ ಪೋಷಕರು ಗಣ್ಯರ ಬಳಿ ಕೇಳಿಕೊಂಡಿದ್ದಾರೆ.
ಬಳಿಕ ಗಣ್ಯರು ಪೊಲೀಸರ ಸಮಕ್ಷಮದಲ್ಲಿ ಮಾತುಕತೆ ನಡೆಸಿ, ವರನಿಗೆ ನೀಡಿದ್ದ ಎಲ್ಲ ಉಡುಗೊರೆಗಳನ್ನೂ ವಾಪಸ್ ಕೊಡಿಸಿದ್ದಾರೆ. ಜತೆಗೆ ಮದುವೆ ಛತ್ರದ ಬಾಡಿಗೆ, ಊಟೋಪಚಾರಕ್ಕಾಗಿ ಮಾಡಿದ್ದ ಖರ್ಚು ಎಲ್ಲಾ ಸೇರಿದಂತೆ ಒಟ್ಟು 6 ಲಕ್ಷವನ್ನು ನೀಡುವಂತೆ ತೀರ್ಮಾನ ಮಾಡಿದ್ದಾರೆ. ಒಂದು ಲಕ್ಷ ನಗದನ್ನು ಸ್ಥಳದಲ್ಲೇ ನೀಡಿ, ಉಳಿದ 5 ಲಕ್ಷದ ಚೆಕ್ ನೀಡಿ, ಮದುವೆ ರದ್ಧತಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ.
ಎಂ.ಸಿಎ ಪದವೀಧರೆಯಾದ ವಧು ಚೈತ್ರಾ ಮತ್ತು ಪ್ರದೀಪ್ ಕುಮಾರ್ ಅವರ ನಿಶ್ಚಿತಾರ್ಥವು ಎರಡು ತಿಂಗಳ ಹಿಂದೆಯೇ ನಡೆದು ವಿವಾಹ ನಿಗದಿಯಾಗಿತ್ತು. ಆದರೆ ಮದುವೆ ದಿನ ಹೈಹೀಲ್ಡ್ ಧರಿಸಿದ್ದೇ ಆಕೆಯ ವಿವಾಹ ನಿಲ್ಲಲು ಕಾರಣವಾಗಿದೆ. ಅದಕ್ಕಿಂತ ಹೆಚ್ಚಾಗಿ ಮಾನವೀಯ ಸಂಬಂಧದ ಬೆಲೆ ಗೊತ್ತಿಲ್ಲದ ಅಂಥ ವರನನ್ನು ಮದುವೆಯಾಗಿದ್ದೂ ಆಕೆ ಸುಖವಾಗಿರುತ್ತಿರಲಿಲ್ಲ ಎಂದು ನೆರೆದವರು ಮಾತಾಡಿಕೊಳ್ಳುತ್ತಿದ್ದರು.