ಮಾಗಡಿ : ಮದ್ಯದ ನಶೆಯಲ್ಲಿದ್ದ ವ್ಯಕ್ತಿಯೊಬ್ಬ ಬಾವಿ ಕಟ್ಟೆಯಲ್ಲಿ ಕೂರುವ ಸಂದರ್ಭ ಆಯ ತಪ್ಪಿ ಪಾಳು ಬಾವಿಗೆ ಬಿದ್ದ ಘಟನೆ ನಡೆದಿದ್ದು, ಕೂಡಲೇ ಸ್ಥಳೀಯರ ಸಹಕಾರದಿಂದ ಮೇಲೆತ್ತಲಾಗಿದ್ದು, ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಾಗಡಿ ಪಟ್ಟಣದ ವಾಸವಿ ಶಾಲಾ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ರೆಡ್ಡಿಯಪ್ಪ(45) ಎಂಬಾತನೇ ಬಾವಿಗೆ ಬಿದ್ದು ಬದುಕಿ ಬಂದವನು. ಈತ ಕಲ್ಯಾಗೇಟ್ ನ ಪುರಸಭೆ ಸದಸ್ಯ ಶಿವಕುಮಾರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಾಗಿದ್ದು, ಕುಡಿದ ಅಮಲಿನಲ್ಲಿದ್ದ ರೆಡ್ಡಿಯಪ್ಪ ಬುಧವಾರ ರಾತ್ರಿ 8.30ರ ಸಮಯದಲ್ಲಿ ಪಾಳು ಬಾವಿಯ ಕಟ್ಟೆ ಮೇಲೆ ಕುಳಿತ ಆತ ಆಯ ತಪ್ಪಿ ಬಾವಿಗೆ ಬಿದ್ದಿದ್ದಾನೆ.
ತಕ್ಷಣ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಆದರೆ ಅಗ್ನಿ ಶಾಮಕದಳ ತಡವಾಗಿ ಬಂದ ಕಾರಣ ಸ್ಥಳೀಯರೇ ಹಗ್ಗದ ಸಹಾಯದಿಂದ ರೆಡ್ಡಿಯಪ್ಪನನ್ನು ಮೇಲೆತ್ತಿದ್ದಾರೆ. ರೆಡ್ಡಿಯಪ್ಪನಿಗೆ ತಲೆಗೆ ತೀವ್ರ ಪೆಟ್ಟುಬಿದ್ದು ಸಾಕಷ್ಟು ರಕ್ತ ಸುರಿಯುತ್ತಿತ್ತು 108 ಆಂಬ್ಯುಲೆನ್ಸ್ಗೆ ಕರೆ ಮಾಡಿದರೂ ಬಾರದ ಕಾರಣ ಅಗ್ನಿ ಶಾಮಕ ವಾಹನದಲ್ಲೇ ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಸ್ತೆ ಪಕ್ಕದಲ್ಲಿಯೇ ಪಾಳು ಬಾವಿ ಇದ್ದರೂ ಅದನ್ನು ಮುಚ್ಚದೆ ಹಾಗೆ ಬಿಟ್ಟಿರುವುದೇ ಘಟನೆಗೆ ಕಾರಣವಾಗಿದೆ. ಇನ್ನು ಮುಂದೆಯಾದರೂ ಸಂಬಂಧಿಸಿದವರು ಬಾವಿಯನ್ನು ಮುಚ್ಚುವ ಕೆಲಸ ಮಾಡುವರೇ ಎಂಬುದನ್ನು ಕಾದು ನೋಡಬೇಕಿದೆ.