News Kannada
Tuesday, September 27 2022

ಕರ್ನಾಟಕ

ಪರಿಹಾರ ಕಾಣದ ದಿಡ್ಡಳ್ಳಿ ಆದಿವಾಸಿಗಳ ಸಮಸ್ಯೆ! - 1 min read

Photo Credit :

ಪರಿಹಾರ ಕಾಣದ ದಿಡ್ಡಳ್ಳಿ ಆದಿವಾಸಿಗಳ ಸಮಸ್ಯೆ!

ಮಡಿಕೇರಿ: ಸಿದ್ದಾಪುರ ಬಳಿಯ ದಿಡ್ಡಳ್ಳಿ ಅರಣ್ಯ ಪ್ರದೇಶದ ಈ ಹಿಂದೆ ತೆರವುಗೊಳಿಸಿದ ಅರಣ್ಯ ಪ್ರದೇಶದಲ್ಲಿ ಮತ್ತೆ ಗುಡಿಸಲು ನಿರ್ಮಿಸುವ ಕಾರ್ಯವನ್ನು ಆದಿವಾಸಿಗಳು ಮಾಡಿದ್ದು ಈಗಾಗಲೇ ನೂರಾರು ಗುಡಿಸಲುಗಳು ಎತ್ತಿವೆ.

ಗುಡಿಸಲು ತೆರವುಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆಯಾದರೂ ಗಿರಿಜನ ಮುಖಂಡೆ ಮುತ್ತಮ್ಮ ಗುಡಿಸಲು ತೆರವುಗೊಳಿಸದಂತೆ ಆಗ್ರಹಿಸಿ ಮರವೇರಿ ಪ್ರತಿಭಟನೆ ನಡೆಸಿದ್ದಾರೆ. ಸುಮಾರು ಐದು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದು, ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಇದೇ ಮುತ್ತಮ್ಮ ಈ ಹಿಂದೆ ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದರು. ಇದೀಗ ಮರವೇರಿ ಪ್ರತಿಭಟನೆ ನಡೆಸಿದ್ದಾರೆ.

ಕಳೆದ ಡಿಸೆಂಬರ್ ನಿಂದಲೇ ಹೋರಾಟ ನಡೆಸುತ್ತಿರುವ ಆದಿವಾಸಿಗಳ ಸಮಸ್ಯೆ ಆಲಿಸಿ ಪರಿಹಾರ ಕಂಡು ಹಿಡಿಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದರೂ ತಪ್ಪಾಗಲಾರದು. ಈಗಾಗಲೇ ದಿಡ್ಡಳ್ಳಿ ಹೊರತು ಪಡಿಸಿ ಬೇರೆಡೆಗಳಲ್ಲಿ ನಿವೇಶನ ನೀಡುವ ಪ್ರಕ್ರಿಯೆ ನಡೆದಿದ್ದು, ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆಗೆ ಬೇಕಾದ ಸಿದ್ಧತೆಗಳು ನಡೆಯುತ್ತಿದ್ದರೂ ಯಾವುದೂ ತ್ವರಿತವಾಗಿ ನಡೆಯದ ಕಾರಣ ಕಳೆದ ಆರು ತಿಂಗಳಿನಿಂದ ಸಮಸ್ಯೆ ಸಮಸ್ಯೆಯಾಗಿಯೇ ಮುಂದುವರೆದಿದೆ.

ಕೆಲವರು ಆದಿವಾಸಿಗಳ ಈ ಸಮಸ್ಯೆಯನ್ನು ಮುಂದಿಟ್ಟುಕೊಂಡು ರಾಜಕೀಯವಾಗಿ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆಯೇ ಹೊರತು ಒಂದೆಡೆ ಕುಳಿತು ಎಲ್ಲರೂ ಒಟ್ಟಾಗಿ ಸೇರಿ ಸಮಸ್ಯೆಗೆ ಪರಿಹಾರ ಹುಡುಕು ಪ್ರಯತ್ನವನ್ನು ಮಾಡುತ್ತಿಲ್ಲ. ಖುದ್ದು ಕಂದಾಯ ಸಚಿವರೇ ಹಾಡಿಗೆ ಬಂದು ಹೋದರೂ ಸಮಸ್ಯೆ ಬಗೆಹರಿದಿಲ್ಲ ಎಂದರೆ ಈ ಪ್ರಕರಣ ಇನ್ನೆಷ್ಟು ದಿನ ಹೀಗೆಯೇ ಮುಂದುವರೆಯಬೇಕು ಎನ್ನುವುದು ಪ್ರಶ್ನೆಯಾಗಿದೆ. ಇಷ್ಟಕ್ಕೂ ಆದಿವಾಸಿಗಳು ಈ ಜಾಗದಲ್ಲಿ ತಲತಲಾಂತರದಿಂದ ಇದ್ದವರಲ್ಲ. ಎಲ್ಲೆಲ್ಲೋ ಇದ್ದವರನ್ನು ಇಲ್ಲಿಗೆ ಕರೆಯಿಸಿ ದಿಢೀರ್ ಆಗಿ ಗುಡಿಸಲು ನಿರ್ಮಿಸಲು ಕುಮ್ಮಕ್ಕು ಕೊಟ್ಟವರೂ ಇದ್ದಾರೆ. ಅಷ್ಟೇ ಅಲ್ಲ ಆದಿವಾಸಿಗಳಿಂದ ಇದಕ್ಕಾಗಿ ಹಣ ಪಡೆದವರೂ ಇದ್ದಾರೆ. ತೋಟದ ಲೈನ್ ಮನೆಗಳಲ್ಲಿ, ಬಾಡಿಗೆ ಮನೆಗಳಲ್ಲಿ ಮತ್ತೆಲ್ಲೋ ಕಾಡಿನ ನಡುವೆ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದ ಆದಿವಾಸಿಗಳು ಇಲ್ಲಿಗೆ ಬಂದು ಹೋರಾಟ ನಡೆಸುತ್ತಿದ್ದಾರೆ.

ಈಗಾಗಲೇ ಮಕ್ಕಳೊಂದಿಗೆ ಬೀಡು ಬಿಟ್ಟು ಪ್ಲಾಸ್ಟಿಕ್ ಹೊದಿಕೆಯ ಬಿಡಾರ ಹೂಡಿರುವ ಇವರು ಮಳೆ ಬಂದರೆ ಸಂಕಷ್ಟದಲ್ಲಿ ದಿನದೂಡಬೇಕಾಗುತ್ತದೆ. ಕೆಲವರು ಇದನ್ನರಿತು ಈ ಹೋರಾಟವೇ ಬೇಡವೆಂದು ಜಿಲ್ಲಾಡಳಿತ ಗುರುತಿಸಿದ ಜಾಗವಿರುವ ಬಸವನಳ್ಳಿಗೆ ತೆರಳಿ ಅಲ್ಲಿ ವಾಸ್ತವ್ಯ ಹೂಡಲು ತಯಾರಿಯಲ್ಲಿದ್ದಾರೆ. ಅರಣ್ಯ ಪ್ರದೇಶದಲ್ಲಿ ಮತ್ತೊಮ್ಮೆ ಗುಡಿಸಲು ನಿರ್ಮಾಣ ಮಾಡಿರುವ ಆದಿವಾಸಿಗಳಿಗೆ ಅಲ್ಲಿಂದ ತೆರಳುವಂತೆ ಸೂಚನೆಯನ್ನು ಈಗಾಗಲೇ ನೀಡಿದ್ದರೂ ಕೆಲವರು ಹಠಕ್ಕೆ ಬಿದ್ದು ಗುಡಿಸಲು ನಿರ್ಮಾಣದಲ್ಲಿ ಮುಂದಾಗಿದ್ದಾರೆ.

ಇದೆಲ್ಲದರ ಮಧ್ಯೆ ಪೊಲೀಸರ ಪಹರೆ ಮುಂದುವರೆದಿದೆ. ಗಿರಿಜನ ಮುಖಂಡೆ ಮುತ್ತಮ್ಮ ಮಾತ್ರ ಸರ್ಕಾರವು ದಿಡ್ಡಳ್ಳಿಯಲ್ಲೆ ತಮಗೆ 5 ಸೆಂಟು ಜಾಗ ನೀಡಿ ಮೂಲಭೂತ ಸೌಕರ್ಯಗಳನ್ನೊಳಗೊಂಡ ಮನೆ ನಿರ್ಮಿಸಿ ಕೊಡಬೇಕು. ಇಲ್ಲದಿದ್ದಲ್ಲಿ ಸರ್ಕಾರ ಗುರುತಿಸಿದ ಜಾಗಕ್ಕೆ ತೆರಳಬೇಕೆಂದರೆ ವಸತಿ ಜೊತೆಗೆ 2 ಎಕರೆ ಜಾಗವನ್ನು ನೀಡಬೇಕು. ಇಲ್ಲದಿದ್ದಲ್ಲಿ ಈ ಜಾಗವನ್ನು  ಬಿಟ್ಟು ಎಲ್ಲಿಗೂ ಕದಲುವುದಿಲ್ಲ ಎಂದು ಮುತ್ತಮ್ಮ ಘೋಷಿಸಿದ್ದಾರೆ. ಇದು ಸಾಧ್ಯನಾ? ಒಟ್ಟಾರೆ ದಿಡ್ಡಳ್ಳಿ ಆದಿವಾಸಿಗಳ ಸಮಸ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದೆ.

See also  ಪ್ರಾಥಮಿಕ ಶಾಲೆಯಲ್ಲಿ ಕೊಡವ ಕಲಿಕೆ: ಡಾ.ಪಾರ್ವತಿ ಅಪ್ಪಯ್ಯ ಅಭಿಲಾಷೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು