ಕುಶಾಲನಗರ: ದುಬಾರೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಸಾಕಾನೆಯ ಪುಂಡಾಟಕ್ಕೆ ಇಬ್ಬರು ಮಾವುತರು ಬಲಿಯಾಗಿದ್ದಾರೆ. ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆ ಶಿಬಿರದಲ್ಲಿ ಘಟನೆ ನಡೆದಿದ್ದು, ಕಾರ್ತಿಕ್ ಎಂಬ ಎಂಟು ವರ್ಷದ ಸಾಕಾನೆ ಇಬ್ಬರನ್ನು ಬಲಿ ಪಡೆದಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.
ಕಾರ್ತಿಕ್ ಆನೆ ಸ್ವಲ್ಪ ಪುಂಡಾನೆಯಾಗಿದ್ದು, ಇದನ್ನು ನೋಡಿಕೊಳ್ಳುವುದೇ ಹರಸಾಹಸವಾಗಿದೆ. ಇದೇ ಆನೆ ಕಳೆದು ಕೆಲವು ಸಮಯಗಳ ಹಿಂದೆ ಅಣ್ಣು ಎಂಬ ಮಾವುತನನ್ನು ತಿವಿದು ಸಾಯಿಸಿತ್ತು. ಆ ಘಟನೆ ಇನ್ನೂ ಹಸಿರಿರುವಾಗಲೇ ಮತ್ತೊಬ್ಬ ಮಾವುತನನ್ನು ಬಲಿ ತೆಗೆದುಕೊಂಡಿದೆ. ತನಗೆ ಆಹಾರ ನೀಡಲು ಬಂದ ಮಾವುತನನ್ನೆ ಈ ಆನೆ ಬಲಿ ಪಡೆದು ಕೊಂಡಿದೆ. ಗುರುವಾರ ಸಂಜೆ ಎಂದಿನಂತೆ ಮಾವುತ ಮಣಿ(22) ಎಂಬಾತ ಆಹಾರ ನೀಡಲು ಆನೆಯ ಬಳಿಗೆ ಹೋಗಿದ್ದಾನೆ. ಈ ವೇಳೆ ದಿಢೀರ್ ಆಗಿ ಅವನ ಮೇಲೆ ದಾಳಿ ಮಾಡಿದ ಆನೆ ತಿವಿದು ಹಾಕಿದೆ.
ಆತ ಬೊಬ್ಬೆ ಹೊಡೆದ ಪರಿಣಾಮ ಇತರೆ ಮಾವುತರು ಬಂದು ಆತನನ್ನು ರಕ್ಷಿಸಿದರಾದರೂ ಮಣಿ ಗಂಭೀರ ಗಾಯಗೊಂಡಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಅರಣ್ಯ ವಲಯಾಧಿಕಾರಿ ನೆಹರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ, ತಾ.ಪಂ. ಸದಸ್ಯ ಚಂಗಪ್ಪ, ಗ್ರಾ.ಪಂ. ಸದಸ್ಯ ನವೀನ್ ಭೇಟಿ ನೀಡಿದ್ದು ಮಹಜರು ನಡೆಸಿದರು. ಮೃತದೇಹದ ಮರಣೋತ್ತರ ಪರೀಕ್ಷೆ ಸಿದ್ದಾಪುರ ಸರಕಾರಿ ಆಸ್ಪತ್ರೆಯಲ್ಲಿ ನಡೆಸಿದ ಬಳಿಕ ಮೃತದೇಹವನ್ನು ವಾರಸುದಾರರಿಗೆ ನೀಡಲಾಗಿದೆ. ಈ ಘಟನೆಯಿಂದ ದುಬಾರೆ ಸಾಕಾನೆ ಶಿಬಿರದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ನರಹಂತಕ ಕಾರ್ತಿಕ್ ಆನೆಯ ಬಳಿ ಸುಳಿಯಲು ಭಯಪಡುವಂತಾಗಿದೆ.