ಚಾಮರಾಜನಗರ: ಈ ಬಾರಿ ವರುಣ ಕೃಪೆ ತೋರಿದ್ದರಿಂದ ಜಿಲ್ಲೆಯ ರೈತರು ಅದರಲ್ಲೂ ಗುಂಡ್ಲುಪೇಟೆ ವ್ಯಾಪ್ತಿಯ ರೈತರು ಖುಷಿಯಾಗಿದ್ದಾರೆ. ಕಳೆದ ವರ್ಷ ಮಳೆಯಿಲ್ಲದೆ ಕೈಕಟ್ಟಿ ಕುಳಿತಿದ್ದವರು ಇದೀಗ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ನೀರು ಕಾಣದ ಕೆರೆಗಳಲ್ಲಿ ನೀರು ತುಂಬುತ್ತಿದೆ. ಕೆಂಬಣ್ಣದಿಂದ ಕೆರೆಗಳು ನಳನಳಿಸುತ್ತಿವೆ. ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿ ಕಾಣಿಸಿತ್ತು. ಪ್ರತಿದಿನ ಖಾಲಿ ಬಿಂದಿಗೆ ಹಿಡಿದು ಕಿ.ಮೀ.ಗಟ್ಟಲೆ ಹುಡುಕಾಟ ನಡೆಸುತ್ತಿದ್ದ ಮಹಿಳೆಯರು, ಪುರುಷರು ಕಣ್ಣಿಗೆ ಕಾಣಲು ಸಿಗುತ್ತಿದ್ದರು. ಇನ್ನು ಬಂಡೀಪುರ ಅರಣ್ಯದಲ್ಲಿದ್ದ ಕೆರೆಕಟ್ಟೆಗಳು ಬತ್ತಿಹೋಗಿ ಪ್ರಾಣಿ, ಪಕ್ಷಿಗಳಿಗೆ ಹಾಹಾಕಾರವುಂಟಾಗಿತ್ತು.
ಕೆರೆಗಳು ಬತ್ತಿಹೋಗಿದ್ದರಿಂದ ಜಾನುವಾರುಗಳಿಗೆ ನೀರು ಮೇವು ನೀಡಲಾಗದೆ ರೈತರು ಕಡಿಮೆ ಬೆಲೆಗೆ ಜಾನುವಾರುಗಳನ್ನು ಮಾರಾಟ ಮಾಡಿದ್ದರು. ಆದರೆ ಮಳೆ ಸುರಿದಿದ್ದರಿಂದ ಸದ್ಯ ರೈತರು ನೆಮ್ಮದಿಯುಸಿರು ಬಿಡುವಂತಾಗಿದೆ. ಎರಡು ವರ್ಷಗಳಿಂದ ಬರಡಾಗಿದ್ದ ಗುಂಡ್ಲುಪೇಟೆ ಪಟ್ಟಣದ ದೊಡ್ಡಕೆರೆಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ತುಂಬಿದೆ. ಮುಂದಿನ ದಿನಗಳಲ್ಲಿ ಮಳೆ ಮುಂದುವರೆದರೆ ಕೆರೆ ತುಂಬಿ ರೈತರಿಗೆ ವರದಾನವಾಗಲಿದೆ. ಈಗಾಗಲೇ ಮುಕ್ಕಾಲು ಭಾಗ ನೀರು ತುಂಬಿದೆ.
ಇನ್ನು ಕಲ್ಲುಕಟ್ಟೆ ಹಳ್ಳದಲ್ಲಿ ಅರ್ಧದಷ್ಟು ನೀರು ಸಂಗ್ರಹವಾಗಿದೆ. ಹಂಗಳದ ದೊಡ್ಡಕೆರೆ, ಪಟ್ಟಣದ ಚಿಕ್ಕಕೆರೆ, ಬೆಳಚಲವಾಡಿ, ಹೊರೆಯಾಲ, ರಂಗೂಪುರ, ಕಮರಹಳ್ಳಿ, ಕೋಟೆಕೆರೆ, ಚಿಕ್ಕಾಟಿ, ಲಕ್ಕೂರು, ಬಲಚವಾಡಿ ಹಾಗೂ ಶ್ಯಾನಾಡ್ರಹಳ್ಳಿ ಕೆರೆಗಳಿಗೆ ನೀರು ತುಂಬುತ್ತಿದೆ. ಮಳೆ ಇದೇ ರೀತಿ ಸುರಿದಿದ್ದೇ ಆದಲ್ಲಿ ಈ ಕೆರೆಗಳಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಗೊಂಡು ಜನಜಾನುವಾರು ನೆಮ್ಮದಿಯಿಂದ ಬದುಕಲು ಮತ್ತು ಅಂತರ್ಜಲ ಹೆಚ್ಚಲು ಸಾಧ್ಯವಾಗಲಿದೆ.
ಕೆಲವು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಭೀಕರ ಬರಗಾಲ ಕಾಣಿಸಿಕೊಂಡಿತ್ತು. ಸಚಿವ ದಿ. ಮಹದೇವಪ್ರಸಾದ್ ಅವರು ಕೆಲವು ಕೆರೆಗಳಿಗೆ ನದಿಯಿಂದ ನೀರನ್ನು ತುಂಬಿಸುವ ಪ್ರಯತ್ನ ಮಾಡಿದ್ದರು. ಅವರ ನಿಧನದ ನಂತರ ಅದು ನೆನೆಗುದಿಗೆ ಬಿದ್ದ ನಂತರ ಈ ವ್ಯಾಪ್ತಿಯ ರೈತರು ಸಂಕಷ್ಟಕ್ಕೀಡಾಗಿದ್ದರು. ಮಳೆಯಿಲ್ಲದೆ ಅರಣ್ಯ ಸೇರಿದಂತೆ ಜಮೀನುಗಳು ಒಣಗಿ ನಿಂತಿದ್ದವು. ಮಳೆ ಬಾರದೆ ಹೋದರೆ ಜೀವನ ಮಾಡುವುದಾದರೂ ಹೇಗೆ ಎಂಬ ಭಯ ರೈತರದ್ದಾದರೆ, ಕೆಲಸವಿಲ್ಲದೆ ಕೂಲಿ ಕಾರ್ಮಿಕರು, ಕೇರಳ, ತಮಿಳುನಾಡಿಗೆ ವಲಸೆ ಹೋಗಿದ್ದರು.
ಆದರೆ ಮೇ ತಿಂಗಳಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಕೆರೆಕಟ್ಟೆಗಳನ್ನು ತುಂಬಿಸುವ ಮೂಲಕ ರೈತರ ಮೊಗದಲ್ಲಿ ಮಂದಹಾಸವನ್ನು ಮೂಡಿಸಿದೆ. ಮುಂದೆ ಮುಂಗಾರು ಸಮರ್ಪಕವಾಗಿ ಆಗಿದ್ದೇ ಆದಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಭರದಲ್ಲಿ ಬೆಂದ ರೈತರು ಚೇತರಿಸಿಕೊಳ್ಳಲು ಸಾಧ್ಯವಾಗಬಹುದು ಎಂಬುದರಲ್ಲಿ ಎರಡು ಮಾತಿಲ್ಲ.