ಮಾಗಡಿ: ಜೆಡಿಎಸ್ ನಿಂದ ಸಿಡಿದು ಹೊರಬಂದಿರುವ ಶಾಸಕರಲ್ಲೊಬ್ಬರಾದ ಮಾಗಡಿ ವಿಧಾನಸಭಾಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಎಷ್ಟರ ಮಟ್ಟಿಗೆ ನಿಜ ಎಂಬುದು ಮಾತ್ರ ಇನ್ನೂ ಖಚಿತವಾಗಿಲ್ಲವಾದರೂ ಸದ್ಯದ ಮಟ್ಟಿಗೆ ರಾಜಕೀಯ ಮೂಲಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ ಬಿಜೆಪಿಯತ್ತ ಒಲವು ತೋರಿರುವುದು ನಿಜ ಎನ್ನಲಾಗುತ್ತಿದೆ.
ಜೆಡಿಎಸ್ ನಿಂದ ಹೊರಬಂದ ಬಳಿಕ ಕಾಂಗ್ರೆಸ್ಗೆ ಸೇರ್ಪಡೆಗೊಳ್ಳುತ್ತಾರೆ ಎಂಬ ಸುದ್ದಿಗಳಿದ್ದರೂ ಅಲ್ಲಿ ಯಾವುದೇ ರೀತಿಯಲ್ಲಿ ರಾಜಕೀಯವಾಗಿ ಬೆಳೆಯುವುದು ಕಷ್ಟವೇ ಎಂಬುದು ಅರಿವಿದ್ದರಿಂದಲೇ ಅವರು ಬಿಜೆಪಿಗೆ ಸೇರ್ಪಡೆಗೊಳ್ಳುವ ತೀರ್ಮಾನ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ರಾಜಕೀಯ ತನ್ನ ಎದುರಾಳಿಯಾಗಿರುವ ಎ.ಮಂಜು ಹೆಚ್ಚಿನ ಜನಸಂಪರ್ಕವನ್ನು ಹೊಂದಿರುವುದರಿಂದ ಮತ್ತು ಪಕ್ಷದ ಬೆಂಬಲ ಇರುವುದರಿಂದ ಕೇವಲ ತನ್ನ ವೈಯಕ್ತಿಕ ವರ್ಚಸ್ಸಿನಿಂದ ಗೆಲುವು ಸಾಧಿಸುವುದು ಕಷ್ಟ ಎಂಬುದು ಗೊತ್ತಾಗಿರುವುದರಿಂದಲೇ ಅವರು ಬಿಜೆಪಿಯತ್ತ ಮುಖ ಮಾಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮಾಗಡಿ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ಲಗ್ಗೆಯಿಟ್ಟಿದ್ದು ಅಲ್ಲಿ ಕಾಂಗ್ರೆಸ್ನ್ನು ತರಲೇ ಬೇಕೆಂಬ ಹಠಕ್ಕೆ ಡಿ.ಕೆ.ಶಿವಕುಮಾರ್ ಬಿದ್ದಿದ್ದಾರೆ. ಜತೆಗೆ ಕಾಂಗ್ರೆಸ್ಗೆ ಸೇರ್ಪಡೆಯಾದರೂ ಅಲ್ಲಿ ಟಿಕೆಟ್ ಸಿಗುತ್ತೆ ಎಂಬ ಧೈರ್ಯವೂ ಇಲ್ಲದಾಗಿದೆ. ಈಗಾಗಲೇ ಹಾಲಿ ಶಾಸಕರಿಗೆ ಟಿಕೆಟ್ ಕೊಡುವುದು ಕಷ್ಟವಾಗಿರುವಾಗ ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ಸಿಗುವುದು ಅಷ್ಟರಲ್ಲೇ ಇದೆ. ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಬಲವಾಗಿದೆ. ಬಿಜೆಪಿ ಪ್ರಾಬಲ್ಯ ಕಡಿಮೆಯಿದೆ. ಇದರಿಂದ ಪಕ್ಷದ ಬೆಂಬಲದೊಂದಿಗೆ ತನ್ನ ವೈಯಕ್ತಿಕ ವರ್ಚಸ್ಸನ್ನು ಸದುಪಯೋಗಿಸಿಕೊಂಡು ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಶಾಸಕರಾಗುವ ಕನಸು ಬಾಲಕೃಷ್ಣ ಅವರದ್ದಾಗಿದೆ.
ಆದರೆ ಮಾಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಎ.ಮಂಜು ಮುಂಚೋಣಿಯಲ್ಲಿದ್ದು, ಬಾಲಕೃಷ್ಣ ಅವರಿಗೆ ರಾಜಕೀಯ ಹಾದಿ ಸುಗಮವಾಗಿರುತ್ತೆ ಎನ್ನಲಾಗದು. ಹೀಗಾಗಿಯೇ ಬಾಲಕೃಷ್ಣ ಅವರು ಕಮಲ ಪಕ್ಷದತ್ತ ಹೆಜ್ಜೆಯಿಡುತ್ತಿದ್ದಾರೆ ಎಂಬುದು ಸದ್ಯದ ಸುದ್ದಿಯಾಗಿದೆ. ಮುಂದೇನಾಗುತ್ತೆ ಎಂಬುದನ್ನು ಕಾದು ನೋಡಬೇಕಾಗಿದೆ.