ಮಂಡ್ಯ: ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿಯ ಕೆಂಬೋರಯ್ಯ ಅವರ ಮನೆಗೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಅಲ್ಲಿ ಬೆಳಗ್ಗಿನ ತಿಂಡಿಯಾಗಿ ಇಡ್ಲಿ, ರಾಗಿ ರೊಟ್ಟಿ, ಅಕ್ಕಿ ರೊಟ್ಟಿ, ಉಚ್ಚೆಳ್ಳು ಚಟ್ನಿ, ಕಾಯಿ ಚಟ್ನಿ, ರವೆ ಇಡ್ಲಿ, ಮೊಳಕೆ ಕಾಳಿನ ಸಾಂಬಾರು, ಹೆಸರು ಬೇಳೆ ದಾಲ್ ಸವಿದರು. ಗುರುವಾರ ಬೆಳಿಗ್ಗೆ ಮಂಡ್ಯದ ನಿಡಘಟ್ಟಕ್ಕೆ ಆಗಮಿಸಿದ ಯಡಿಯೂರಪ್ಪ ಅವರನ್ನು ಕಾರ್ಯಕರ್ತರು ಸ್ವಾಗತಿಸಿ ಬಳಿಕ ಕೆ. ಬೋರಯ್ಯ ಅವರ ಮನೆಗೆ ಕರೆದೊಯ್ದರು.
ಅಲ್ಲಿ ಬೆಳಗ್ಗಿನ ತಿಂಡಿಯನ್ನು ಯಡಿಯೂರಪ್ಪ ಅವರು ಮುಖಂಡರಾದ ಕೆ. ಶಿವರಾಂ, ಬಿ. ಸೋಮಶೇಖರ್, ತೇಜಸ್ವಿನಿ ಸೇರಿದಂತೆ ಸ್ಥಳೀಯ ನಾಯಕರೊಂದಿಗೆ ಸವಿದರು. ಯಡಿಯೂರಪ್ಪನವರು ಕಾಡುಕೊತ್ತನಹಳ್ಳಿಗೆ ಆಗಮಿಸಿದ ವೇಳೆ ಊರಿನ ಜನರೆಲ್ಲ ಆಗಮಿಸಿ ಸಂಭ್ರಮಿಸಿದ್ದರು. ಇನ್ನು ಯಡಿಯೂರಪ್ಪ ಅವರು ಗ್ರಾಮಕ್ಕೆ ಆಗಮಿಸಿ ಗ್ರಾಮದ ಹೊನ್ನಾರತಿ ಲಕ್ಷ್ಮೀ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ತೆರಳುವ ಮುನ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪ್ರವಾಸ ಮುಂದುವರೆಸಿದರು.
ಮಂಡ್ಯದ ತಮಿಳು ಕಾಲೋನಿಗೆ ಭೇಟಿ ನೀಡಿ ನೀಡಿ ಮಾತನಾಡಿ, ರಾಜ್ಯದ ಕೊಳಗೇರಿ ನಿವಾಸಿಗಳ ಸ್ಥಿತಿ- ಗತಿಯನ್ನು ಅರಿತು, ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ತರುವಾಯ ಸೂಕ್ತ ಯೋಜನೆಗಳನ್ನು ಸಾಕಾರಗೊಳಿಸಲು ರಾಜ್ಯವ್ಯಾಪಿ ಪ್ರವಾಸ ನಡೆಸಲಾಗುತ್ತಿದೆ. ತಮಿಳು ಕಾಲೋನಿಯ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ವಕೀಲರನ್ನು ಭೇಟಿ ಮಾಡಿ ತಡೆಯಾಜ್ಞೆ ತೆರವಿಗೆ ಪ್ರಯತ್ನಿಸಲಾಗುವುದು. ಇದೀಗ ಇಲ್ಲಿನ ಕಾಲೋನಿಯ 520 ಕುಟುಂಬಗಳ ಬದುಕು ಬೀದಿಗೆ ಬಿದ್ದಿದೆ ಎಂದು ಹೇಳಿದರು.
ಬಿಎಸ್ವೈ ವಿರುದ್ಧ ಆರೋಪ
ಯಡಿಯೂರಪ್ಪ ಅವರು ಗ್ರಾಮಕ್ಕೆ ಆಗಮಿಸಿ ದಲಿತರ ಮನೆಯಲ್ಲಿ ಉಪಹಾರ ಸೇವಿಸಿ ಹೋದ ಬಳಿಕ ಹೊಸ ವಿವಾದವೊಂದು ಶುರುವಾಗಿದೆ. ಅದೇನೆಂದರೆ. ಯಡಿಯೂರಪ್ಪ ಅವರು ಮದ್ದೂರು ತಾಲೂಕಿನ ಕೊತ್ತನಹಳ್ಳಿಗೆ ಆಗಮಿಸಿ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಶೂ ಧರಿಸಿಯೇ ಪುಷ್ಪಾರ್ಚನೆ ಮಾಡಿದ್ದಾರೆ ಹಾಗೆಂದು ಗ್ರಾಮದ ಕೆಲವರು ಆರೋಪಿಸುತ್ತಿದ್ದು, ಇದು ದಲಿತ ವಿರೋಧಿ ಧೋರಣೆಯಾಗಿದೆ ಎಂದು ದೂರಿದ್ದಾರೆ.