ಅರಕಲಗೂಡು: ತಾಲೂಕಿನ ಅಜ್ಜೂರು ಗ್ರಾಮದಲ್ಲಿ ಜನತೆ ಜ್ವರದಿಂದ ಬಳಲುತ್ತಿದ್ದು ಡೆಂಗ್ಯೂ ಬಾಧಿಸಿರುವ ಶಂಕೆ ವ್ಯಕ್ತವಾಗಿದೆ.
ಯಲಗತವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಈ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಸಾಕಷ್ಟು ಮಂದಿಗೆ ಜ್ವರ, ನೆಗಡಿ, ಶೀತ ಮೈ, ಕೈ ನೋವು ಕಾಣಿಸಿಕೊಂಡಿದೆ. ಕಾಯಿಲೆಗೆ ತುತ್ತಾದ ಜನರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರೂ ಗುಣಮುಖವಾಗದೆ ನರಳಾಡುತ್ತಿದ್ದು, ಡೆಂಗ್ಯೂ ಭೀತಿ ಎಲ್ಲೆಡೆ ಕಂಡು ಬರುತ್ತಿದೆ.
ಗ್ರಾಮದ ಕೆಲ ನಿವಾಸಿಗಳ ಮನೆ ಮುಂಭಾಗ ಚರಂಡಿಗಳಲ್ಲಿ ಸ್ವಚ್ಛತೆಯಿಲ್ಲದೆ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದ್ದು ಶುಚಿತ್ವದ ಕೊರತೆಯೇ ಕಾರಣವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಕೆಲ ದಿನಗಳ ಹಿಂದೆ ಜ್ವರದಿಂದ ಬಳುತ್ತಿದ್ದು, ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗಿದೆ. ಆದರೆ ನಮ್ಮ ತಂದೆ ರಾಜೇಗೌಡ ಎಂಬುವವರಿಗೆ ಕಾಯಿಲೆ ವಾಸಿಯಾಗದೆ ಡೆಂಗ್ಯೂ ಬಾಧಿಸಿರುವ ಆತಂಕ ಉಂಟಾಗಿದೆ ಎಂದು ಗ್ರಾಮದ ಯೋಗೇಶ್ ಅಳಲು ತೋಡಿಕೊಂಡಿದ್ದಾರೆ.
ತಮ್ಮೂರಿನಲ್ಲಿ ಚರಂಡಿ ಸ್ವಚ್ಛತೆಯಿಲ್ಲ, ಶುದ್ಧಕುಡಿಯುವ ನೀರು ಸಿಗುತ್ತಿಲ್ಲ, ಅಶುಚಿತ್ವ ತಾಂಡವಾಡುತ್ತಿದ್ದು ರೋಗ ಹರಡಲು ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.