News Kannada
Thursday, October 06 2022

ಕರ್ನಾಟಕ

ರೆಸಾರ್ಟ್ ನಿಂದ ಗಿರಿಜನರ ಮಾರ್ಗ ನಿರ್ಬಂಧ: ಆರೋಪ, ಪ್ರತಿಭಟನೆ - 1 min read

Photo Credit :

ರೆಸಾರ್ಟ್ ನಿಂದ ಗಿರಿಜನರ ಮಾರ್ಗ ನಿರ್ಬಂಧ: ಆರೋಪ, ಪ್ರತಿಭಟನೆ

ಮಡಿಕೇರಿ: ಕಕ್ಕಬ್ಬೆ ಕುಂಜಿಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯವಕಪಾಡಿ ಗ್ರಾಮದಲ್ಲಿರುವ ರೆಸಾರ್ಟ್ ವೊಂದು ಈ ಭಾಗದಲ್ಲಿ ವಾಸಿಸುತ್ತಿರುವ ಅಡಿಯ ಜನಾಂಗ ಬಾಂಧವರು ಸಂಚರಿಸುವ ರಸ್ತೆಗೆ ತಡೆಯೊಡ್ಡಿದೆ ಎಂದು ಆರೋಪಿಸಿ ಕಾವೇರಿಸೇನೆ ಸಂಘಟನೆ ಹಾಗೂ ಅಡಿಯ ಜನಾಂಗದ ಮಂದಿ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಕಾವೇರಿಸೇನೆ ಸಂಚಾಲಕ ಕೆ.ಎ. ರವಿಚಂಗಪ್ಪ, ಕಳೆದ ಐವತ್ತು, ಅರವತ್ತು ವರ್ಷಗಳಿಂದ ಯವಕಪಾಡಿ ವ್ಯಾಪ್ತಿಯಲ್ಲಿ ನೆಲೆ ನಿಂತಿರುವ ಅಡಿಯ ಕುಟುಂಬಗಳಿಗೆ ಸಂಚಾರಕ್ಕಿದ್ದ ರಸ್ತೆಗೆ ಅಡ್ಡಿಪಡಿಸಲಾಗಿದ್ದು, ಈ ಪ್ರಕರಣದಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಕಳೆದ ಅನೇಕ ವರ್ಷಗಳಿಂದ ಅಡಿಯ ಜನಾಂಗ ಬಂಧುಗಳು ಸಂಚರಿಸುತ್ತಿದ್ದ ರಸ್ತೆಗೆ ಅಡ್ಡಲಾಗಿ ಗೇಟ್ ನಿರ್ಮಿಸಿರುವ ರೆಸಾರ್ಟ್ ಆಡಳಿತ ಮಂಡಳಿ ಅನ್ಯಾಯವೆಸಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇತ್ತೀಚೆಗೆ ಸಿಮೆಂಟ್ ರಸ್ತೆ ನಿರ್ಮಿಸಿದ ರೆಸಾರ್ಟ್, ಈ ರಸ್ತೆಯಲ್ಲಿ ಅಡಿಯರು ಸೇರಿದಂತೆ ಎಲ್ಲರು ಸಂಚರಿಸಬಹುದೆಂದು ಭರವಸೆ ನೀಡಿತ್ತು. ಆದರೆ, ಇಲ್ಲಿಯವರೆಗೆ ಈ ಭಾಗದ ದುರ್ಬಲರಿಗೆ ಸಂಚರಿಸಲು ರಸ್ತೆಯನ್ನು ಮುಕ್ತಗೊಳಿಸಿಲ್ಲ.

ಶ್ರೀಮಂತ ಪ್ರವಾಸಿಗರು ರೆಸಾರ್ಟ್ ಗೆ ಆಗಮಿಸುವುದರಿಂದ ಅಡಿಯರು ಈ ಮಾರ್ಗವನ್ನು ಬಳಸಿದರೆ ಅಸಹ್ಯಕರ ವಾತಾವರಣ ಸೃಷ್ಟಿಯಾಗುತ್ತದೆ ಎಂದು ರೆಸಾರ್ಟ್ ಆಡಳಿತ ಮಂಡಳಿ ಹೀಯಾಳಿಸುತ್ತಿರುವುದಾಗಿ ರವಿಚಂಗಪ್ಪ ಆರೋಪಿಸಿದರು.

ಜಿಲ್ಲಾಡಳಿತ ಸ್ಥಳ ಪರಿಶೀಲನೆ ನಡೆಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವ ತನಕ ನಾವುಗಳು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲವೆಂದು ಎಚ್ಚರಿಕೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಡಿಯರು ಈಗಾಗಲೆ ಮನವಿಯನ್ನು ಸಲ್ಲಿಸಿದ್ದರೂ ಯಾವುದೇ ಸ್ಪಂದನ ದೊರಕಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಸತ್ಯಾನ್ವೇಷಣಾ ಸಮಿತಿಯ ಪ್ರಮುಖರಾದ ಕೇಟೋಳಿರ ಸನ್ನಿ ಸೋಮಣ್ಣ ಮಾತನಾಡಿ, ಕಾನೂನು ಬಾಹಿರವಾಗಿ ರೆಸಾರ್ಟ್ ತಲೆ ಎತ್ತಿರುವ ಬಗ್ಗೆ 2007ರಿಂದಲೆ ಗ್ರಾಮ ಪಂಚಾಯ್ತಿ ಮೂಲಕ ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನ ಸೆಳೆಯುತ್ತಾ ಬಂದಿದ್ದರು ಇಲ್ಲಿಯವರೆಗೆ ರೆಸಾರ್ಟ್ ವಿರುದ್ಧ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು. ಪರಿಸರ ಕಾಯ್ದೆಯನ್ನು ಉಲ್ಲಂಘಿಸಿರುವ ಬಗ್ಗೆ ಸಾಕಷ್ಟು ಸಾಕ್ಷಿಗಳಿವೆ. ಹೊಳೆ, ನದಿ, ಜಲ ಮೂಲಗಳಿರುವ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಗೊಂಡಿದೆ. ಕಾಡಾನೆಗಳ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಕಾಡಾನೆಗಳು ಗ್ರಾಮಕ್ಕೆ ದಾಳಿ ಇಡುತ್ತಿವೆ.

ನಿರ್ಗತಿಕರಾಗಿರುವ ಅಡಿಯರಿಗೆ ಕುಡಿಯುವ ನೀರು ಕೂಡ ಸಿಗದಂತೆ ಪ್ರಾಕೃತಿಕವಾಗಿ ಹರಿಯುವ ನೀರಿಗೆ ರೆಸಾರ್ಟ್ ತಡೆಯೊಡ್ಡಿದೆ. ಶತಮಾನಗಳಷ್ಟು ಹಳೆಯದಾದ ರಸ್ತೆಯನ್ನು ನಿರ್ಬಂಧಿಸಲಾಗಿದ್ದು, ಸರ್ವೇ ಮಾಡಿದ ನಕ್ಷೆಯಲ್ಲಿ ನಿಯಮವನ್ನು ಉಲ್ಲಂಘಿಸಿ ಮೂರು ಭಾಗದಲ್ಲಿ ರಸ್ತೆ ಇರುವಂತೆ ತೋರಿಸಲಾಗಿದೆ ಎಂದು ಆರೋಪಿಸಿದರು. ಅಡಿಯರನ್ನು ಕೀಳುಮಟ್ಟದಲ್ಲಿ ನಿಂದನೆ ಮಾಡುತ್ತಿರುವ ರೆಸಾರ್ಟ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸನ್ನಿ ಸೋಮಣ್ಣ ಒತ್ತಾಯಿಸಿದರು.

ಕಚೇರಿಯಲ್ಲೇ ಧರಣಿ:

ಇದಕ್ಕೂ ಮೊದಲು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ರಸ್ತೆಯನ್ನು ದುರ್ಬಲರ ಓಡಾಟಕ್ಕೆ ಮುಕ್ತಗೊಳಿಸುವಂತೆ ಮನವಿ ಪತ್ರ ಸಲ್ಲಿಸಿ ಒಂದೂವರೆ ತಿಂಗಳುಗಳೇ ಕಳೆದಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

See also  ನೆರೆ ಸಂತ್ರಸ್ತರಿಗೆ 10ಸೆಂಟ್ಸ್ ಜಾಗ ದಾನ ಮಾಡಿದ ಕಾಸರಗೋಡು ನಿವಾಸಿ

ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಕಂದಾಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಕಂದಾಯ ಅಧಿಕಾರಿಗಳು ಬಡವರ ಪರವಾಗಿಲ್ಲ, ಜಿಲ್ಲಾಧಿಕಾರಿಗಳು ತಕ್ಷಣ ಪರಿಹಾರ ಸೂಚಿಸಬೇಕು, ಅಲ್ಲಿಯವರೆಗೆ ಕಚೇರಿ ಬಿಟ್ಟು ತೆರಳುವುದಿಲ್ಲವೆಂದು ಪಟ್ಟು ಹಿಡಿದರು. ಅಲ್ಲದೆ ಕಚೇರಿ ಆವರಣದಲ್ಲೇ ಧರಣಿ ಕುಳಿತರು. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು.

ನಂತರ ಕಾವೇರಿಸೇನೆ, ಸತ್ಯಾನ್ವೇಷಣಾ ಸಮಿತಿಯ ಪ್ರಮುಖರು ಹಾಗೂ ಅಡಿಯ ಜನಾಂಗದವರು ಜಿಲ್ಲಾಡಳಿತ ಭವನದ ಎದುರು ಧರಣಿಯನ್ನು ಆರಂಭಿಸಿದರು. ಪ್ರತಿಭಟನೆಯಲ್ಲಿ ಯವಕಪಾಡಿ ಗ್ರಾಮ ವ್ಯಾಪ್ತಿಯ ಅಡಿಯರ ಅಮ್ಮುಣಿ, ಸುಂದರಿ, ಚಾತ ಕರಿಯ, ಬೊಳತ್ತ, ಮೊಣ್ಣ ಮತ್ತಿತರರು ಪಾಲ್ಗೊಂಡಿದ್ದರು.

ಸೂಕ್ತ ಕ್ರಮ:
ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಸರಕಾರಿ ರಸ್ತೆಯನ್ನು ಅತಿಕ್ರಮಣ ಮಾಡಿದ್ದಲ್ಲಿ ಕಾನೂನು ವ್ಯಾಪ್ತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು