News Kannada
Friday, September 30 2022

ಕರ್ನಾಟಕ

ಕನಿಷ್ಠ ವೇತನಕ್ಕಾಗಿ ಒತ್ತಾಯ: ಜೂ.19 ರಂದು ಗ್ರಂಥಾಲಯ ಮೇಲ್ವಿಚಾರಕರ ಪ್ರತಿಭಟನೆ - 1 min read

Photo Credit :

ಕನಿಷ್ಠ ವೇತನಕ್ಕಾಗಿ ಒತ್ತಾಯ: ಜೂ.19 ರಂದು ಗ್ರಂಥಾಲಯ ಮೇಲ್ವಿಚಾರಕರ ಪ್ರತಿಭಟನೆ

ಮಡಿಕೇರಿ: ರಾಜ್ಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ಮತ್ತು ತುಟ್ಟಿಭತ್ಯೆಯನ್ನು ನೀಡಬೇಕೆಂದು ಒತ್ತಾಯಿಸಿ ಜೂ.19 ರಂದು ನಗರದಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಕೊಡಗು ಜಿಲ್ಲಾ ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕರ ಸಂಘ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ಮುಖಂಡ ಹಾಗೂ ಸಂಘದ ಪ್ರಮುಖರಾದ ಪಿ.ಆರ್.ಭರತ್, ಸರ್ಕಾರ ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕರನ್ನು ಕಡೆಗಣಿಸಿದ್ದು, ಕಳೆದ ಅನೇಕ ವರ್ಷಗಳಿಂದ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ, ಹೆರಿಗೆ ಭತ್ಯೆ, ಗ್ರಾಚ್ಯುಟಿ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿದರು.

ಸರ್ಕಾರದಿಂದ ಕನಿಷ್ಠ ವೇತನ ಕೊಡಿಸುವುದಾಗಿ ಆಮಿಷವೊಡ್ಡಿದ ಕೆಲವರು ಗ್ರಂಥಾಲಯ ಮೇಲ್ವಿಚಾರಕರಿಂದ ತಲಾ 10 ಸಾವಿರ ರೂ. ಸಂಗ್ರಹಿಸಿ 3 ಕೋಟಿ ರೂ.ಗಳಿಗೂ ಹೆಚ್ಚಿನ ಹಣ ಲೂಟಿ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಸರಕಾರ ತನಿಖೆಗೆ ಆದೇಶ ಮಾಡಿಲ್ಲ ವೆಂದು ಟೀಕಿಸಿದ ಅವರು ಈ ಪ್ರಕರಣವನ್ನು ತನಿಖೆೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇತ್ತೀಚೆಗೆ ಸರ್ಕಾರ ಗ್ರಂಥಾಲಯ ಮೇಲ್ವಿಚಾರಕರ ಕರ್ತವ್ಯದ ಅವಧಿಯನ್ನು 8 ಗಂಟೆಯಿಂದ 4 ಗಂಟೆಗೆ ಕಡಿತಗೊಳಿಸಿದೆ. ಕನಿಷ್ಠ ವೇತನ ನೀಡಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದರು. ರಾಜ್ಯಾದ್ಯಂತ ಸುಮಾರು 6 ಸಾವಿರಕ್ಕೂ ಹೆಚ್ಚಿನ ಗ್ರಂಥಾಲಯಗಳಿದ್ದು, ಹತ್ತಾರು ವರ್ಷಗಳಿಂದ ಸಾವಿರಾರು ಸಿಬ್ಬಂದಿಗಳು ದುಡಿಯುತ್ತಿದ್ದಾರೆ. ಇವರಿಗೆ ಇಲ್ಲಿಯವರೆಗೆ ಯಾವುದೇ ಮೂಲಭೂತ ಸೌಲಭ್ಯವನ್ನು ಸರ್ಕಾರ ನೀಡಿಲ್ಲ. ಈ ಕಾರಣದಿಂದ ಗ್ರಂಥಾಲಯ ಮೇಲ್ವಿಚಾರಕರ ಸಂಘವು ಸಿಐಟಿಯು ಸಂಯೋಜನೆಯೊಂದಿಗೆ ಜೂ.19 ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಮುಖ್ಯ ಗ್ರಂಥಾಲಯದ ಎದುರು ಧರಣಿ ಸತ್ಯಾಗ್ರಹ ನಡೆಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಿದೆ ಎಂದರು.

ಸರ್ಕಾರ ನಿಗಧಿಪಡಿಸಿರುವ ಕನಿಷ್ಠ ವೇತನ ಮತ್ತು ತುಟ್ಟಿ ಭತ್ಯೆಯನ್ನು ತಕ್ಷಣ ಜಾರಿ ಮಾಡಬೇಕು, ಕೆಲಸದ ಅವಧಿಯನ್ನು ಕಡಿತಗೊಳಿಸಿರುವ ಕ್ರಮವನ್ನು ಹಿಂದಕ್ಕೆ ಪಡೆಯಬೇಕು, ಮಾಸಿಕ ವೇತನಕ್ಕಾಗಿ ಗ್ರಾಮ ಪಂಚಾಯ್ತಿ ಸಹಿ ಆದೇಶವನ್ನು ಕೈಬಿಡಬೇಕು, ಮಾಸಿಕ ವೇತನ ಪ್ರತಿ ತಿಂಗಳ 5ನೇ ತಾರೀಖಿಗೆ ಪಾವತಿಸಬೇಕು, ಜಿಲ್ಲಾ ಕೇಂದ್ರಕ್ಕೆ ಲೆಕ್ಕ ಪರಿಶೋಧನೆಗೆಂದು ಹೋಗಿ ಬರುವ ಟಿಎ, ಡಿಎ ನೀಡಬೇಕು ಹಾಗೂ ಹೆರಿಗೆ ಭತ್ಯೆ ಬಿಡುಗಡೆ ಮಾಡಬೇಕೆಂದು ಪಿ.ಆರ್.ಭರತ್ ಒತ್ತಾಯಿಸಿದರು.

ಜೂ.19 ರಂದು ಬೆಳಗ್ಗೆ ನಗರದ ಬಾಲಭವನದಲ್ಲಿ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಜಿಲ್ಲಾ ಸಮಾವೇಶ ನಡೆಯಲಿದೆಯೆಂದು ಸಂಘದ ಪ್ರಮುಖರು ಇದೇ ಸಂದರ್ಭ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಸಾಹಿತಿಗಳಾದ ಭಾರದ್ವಾಜ್ ಉದ್ಘಾಟಿಸಲಿದ್ದು, ಗ್ರಾಮ ಪಂಚಾಯ್ತಿ ನೌಕರರ ಸಂಘದ ಅಧ್ಯಕ್ಷರಾದ ಪಿ.ಆರ್.ಭರತ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಹೆಚ್.ಬಿ.ರಮೇಶ್, ಹಿರಿಯ ಕಾರ್ಮಿಕ ಅಧಿಕಾರಿ ಎಂ.ಎಂ.ಯತ್ನಟಿ, ಬಿಎಸ್ಎನ್ಎಲ್ ನೌಕರರ ಸಂಘದ ಅಧ್ಯಕ್ಷರಾದ ಅಂಥೋಣಿ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷರಾದ ಕಾವೇರಮ್ಮ ಮತ್ತಿತರ ಪ್ರಮುಖರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

See also  ಜಿಂಕೆ ಬೇಟೆಗಾರರಿಬ್ಬರು ಸಿಕ್ಕಿಬಿದ್ದರು!

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಸಿ.ಜೆ.ಲೀಲಾವತಿ, ಎಂ,ಎ. ಜಲಜಾಕ್ಷಿ, ಹೆಚ್.ಎ.ವಸಂತಿ, ಎಂ.ಜಿ.ಮೊಣ್ಣಪ್ಪ ಹಾಗೂ ಎ.ಹೆಚ್. ಪುರುಷೋತ್ತಮ ಉಪಸ್ಥಿತರಿದ್ದರು. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು