ಮಂಡ್ಯ: ಮದ್ದೂರು ತಾಲೂಕಿನ ಹಲಗೂರು ವ್ಯಾಪ್ತಿಯಲ್ಲಿ ಉರುಳು ಹಾಕಿ ಜಿಂಕೆ ಇನ್ನಿತರೆ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಇಬ್ಬರು ಬೇಟೆಗಾರರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ತಮಿಳುನಾಡಿನ ಪೆರಂದೂರು ಜಿಲ್ಲೆಯ ಸಣ್ಣೆಮಲೈ ಗ್ರಾಮದ ವಾಸಿ ಸೆಲ್ಲಪನ್ ಮತ್ತು ಬೀರೋಟ ಗ್ರಾಮದ ತಿಮ್ಮೇಗೌಡ ಬಂಧಿತರಾಗಿದ್ದಾರೆ. ಇವರು ಕಾವೇರಿ ವನ್ಯಧಾಮದ ಬಸವನಬೆಟ್ಟದ ಮೀಸಲು ಅರಣ್ಯ ಪ್ರದೇಶದ ತಾಳವಾಡಿ ಸಮೀಪದ ಆನೆಬಿದ್ದ ಹಳ್ಳದ ಬಳಿ ಜಿಂಕೆಯನ್ನು ಬೇಟೆ ನಾಯಿಗಳಿಂದ ಹಿಡಿಸಿ, ಅದನ್ನು ಸಾಯಿಸಿ ಮಾಂಸವನ್ನು ಕೊಂಡೊಯ್ಯುತ್ತಿದ್ದಾಗ ಅರಣ್ಯಾಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ಮುತ್ತತ್ತಿಯಲ್ಲಿ ಜಿಂಕೆಗಳೆರಡು ಕಿಡಿಗೇಡಿಗಳು ಹಾಕಿದ್ದ ಉರುಳಿಗೆ ಸಿಕ್ಕಿಹಾಕಿಕೊಂಡಿದ್ದವು. ಅವುಗಳ ಕಿರುಚಾಟ ಕೇಳಿ ದಾರಿಯಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರರಿಬ್ಬರು ಕಾಡಿನೊಳಗೆ ಹುಡುಕಾಡಿ ಜಿಂಕೆಗಳನ್ನು ಉರುಳಿನಿಂದ ಬಿಡಿಸಿದ್ದರು. ಜಿಂಕೆಗಳ ಕಿರುಚಾಟ, ಉರುಳಿನಲ್ಲಿ ಸಿಲುಕಿ ಒದ್ದಾಡುತ್ತಿರುವುದು ಮತ್ತು ಅವುಗಳನ್ನು ಬಿಡಿಸುತ್ತಿರುವುದನ್ನು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು.
ಇದು ವೈರಲ್ ಆಗಿ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಜನ ಮಾತಾಡುವಂತಾಗಿತ್ತು. ಇದರಿಂದ ಎಚ್ಚೆತ್ತ ಅರಣ್ಯಾಧಿಕಾರಿಗಳು ಬೇಟೆಗಾರರ ಬಗ್ಗೆ ನಿಗಾ ವಹಿಸಲು ಸಿಬ್ಬಂದಿಗೆ ಸೂಚಿಸಿದ್ದರು. ಅದರಂತೆ ಸಿಬ್ಬಂದಿ ಗುರುವಾರ ಬಸವನಬೆಟ್ಟದ ಮೀಸಲು ಅರಣ್ಯ ಪ್ರದೇಶದ ತಾಳವಾಡಿ ಸಮೀಪ ಗಸ್ತಿನಲ್ಲಿದ್ದಾಗ ಆನೆಬಿದ್ದ ಹಳ್ಳದ ಬಳಿ ವ್ಯಕ್ತಿಗಳು ಮಾತನಾಡುತ್ತಿರುವ ಶಬ್ದವನ್ನು ಕೇಳಿ ಸ್ಥಳಕ್ಕೆ ತೆರಳಿದಾಗ ಜಿಂಕೆ ಮಾಂಸವನ್ನು ಕೊಂಡೊಯ್ಯುತ್ತಿದ್ದ ತಿಮ್ಮೇಗೌಡ ಮತ್ತು ಸೆಲ್ಲಪನ್ನನ್ನು ಎಂಬುವರನ್ನು ಹಿಡಿದು ಪರಿಶೀಲಿಸಿದಾಗ ಅವರ ಬಳಿ ಜಿಂಕೆ ಮಾಂಸವಿರುವುದು ಪತ್ತೆಯಾಗಿದೆ.
ಆರೋಪಿಗಳಿಬ್ಬರು ನಾಯಿಗಳನ್ನು ಸಾಕಿಕೊಂಡು ಕಾಡು ಪ್ರಾಣಿಗಳಾದ ಮೊಲ, ಮುಳ್ಳಂದಿ, ಕಾಡು ಕುರಿ, ಜಿಂಕೆ ಇನ್ನಿತರೆ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿರುವ ಅರಣ್ಯಾಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.