ಚಾಮರಾಜನಗರ: ನಗರಗಳಲ್ಲಿ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಹಲವು ರೀತಿಯ ಅನುಕೂಲಗಳಿವೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಶಾಲೆಗೆ ತೆರಳಲು ಬಸ್ಸನ್ನು ನಂಬಿದ್ದ ವಿದ್ಯಾರ್ಥಿಗಳ ಬದುಕು ಮೂರಾಬಟ್ಟೆಯಾಗುತ್ತಿದೆ ಎಂಬುದಕ್ಕೆ ಯಳಂದೂರು ತಾಲೂಕಿನ ಮೆಳ್ಳಹಳ್ಳಿ ಗೇಟ್ ಬಳಿ ಇರುವ ಸರ್ಕಾರಿ ಆದರ್ಶ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದಾರೆ.
ಯಳಂದೂರಿನಿಂದ ಸುಮಾರು ಮೂರು ಕಿ.ಮೀ.ದೂರದ ಮೆಳ್ಳಹಳ್ಳಿಗೇಟ್ ಬಳಿ ಸರ್ಕಾರದ ವತಿಯಿಂದ ಪ್ರಸಕ್ತ ವರ್ಷ ಸರ್ಕಾರಿ ಆದರ್ಶ ಶಾಲೆಯ ನೂತನ ಕಟ್ಟಡವನ್ನು ನಿರ್ಮಿಸಿ ಶಾಲೆಯನ್ನು ಆರಂಭಿಸಲಾಗಿದೆ. ಈ ಶಾಲೆ ಆರಂಭವಾದ ಬಳಿಕ ಸುತ್ತಮುತ್ತಲ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗಿದೆ. ಹೀಗಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿ ಸುಮಾರು 350ಕ್ಕೂ ಹೆಚ್ಚು ಮಂದಿ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಈ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಕಾರಣ ಖಾಸಗಿ ಬಸ್ ಗಳಲ್ಲಿ ಮೆಳ್ಳಹಳ್ಳಿ ಗೇಟ್ ತನಕ ತೆರಳಿ ಅಲ್ಲಿಂದ ಸುಮಾರು ಅರ್ಧ ಕಿ.ಮೀ. ನಡೆಯುವುದು ಅನಿವಾರ್ಯವಾಗಿದೆ.
ಯಳಂದೂರಿನಿಂದ ಮೆಳ್ಳಹಳ್ಳಿಗೇಟ್ ತನಕ ಖಾಸಗಿ ಬಸ್ ನಲ್ಲಿ ತೆರಳಬೇಕಾಗಿರುವುದರಿಂದ ಬಸ್ ನವರು ಮಕ್ಕಳನ್ನು ಕುರಿಗಳಂತೆ ತುಂಬಿಸಿಕೊಂಡು ಹೋಗುತ್ತಾರೆ. ಒಂದು ವೇಳೆ ಬಸ್ ಗಳು ಸಿಗದೆ ಹೋದರೆ ಸುಮಾರು ಕಿ.ಮೀ.ನಷ್ಟು ಮಕ್ಕಳು ನಡೆಯಲೇ ಬೇಕಾಗುತ್ತದೆ. ಶಾಲೆ ಬಿಟ್ಟ ನಂತರವೂ ಇದೇ ಸಮಸ್ಯೆ ಶಾಲಾ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬಸ್ ವ್ಯವಸ್ಥೆಯಿಲ್ಲದ ಕಾರಣದಿಂದಾಗಿ ಪ್ರತಿದಿನವೂ ಪರದಾಟ ತಪ್ಪಿದಲ್ಲ.
ಸಾರಿಗೆ ಬಸ್ ಗಳು ರಾಷ್ಟ್ರೀಯ ಹೆದ್ದಾರಿ 209ರ ಮೂಲಕವೇ ಸಂಚರಿಸಿದರೂ ಮೆಳ್ಳಹಳ್ಳಿ ಗೇಟ್ ಬಳಿ ನಿಲುಗಡೆ ಮಾಡುವುದಿಲ್ಲ. ಪರಿಣಾಮ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಖಾಸಗಿ ಬಸ್ ನಲ್ಲಿ ಪ್ರಯಾಣ ಮಾಡುವುದು ಅನಿವಾರ್ಯವಾಗಿದೆ. ಈ ಬಸ್ ಗಳು ವಿದ್ಯಾರ್ಥಿಗಳನ್ನು ಬಿಟ್ಟು ಹೋಗುವಂತೆಯೂ ಇಲ್ಲದ ಕಾರಣದಿಂದಾಗಿ ಕುರಿಗಳನ್ನು ತುಂಬಿಸುವ ಮಾದರಿಯಲ್ಲಿ ಬಸ್ ನಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದಾರೆ.
ಒಟ್ಟಾರೆ ಹೇಳಬೇಕೆಂದರೆ ಸರ್ಕಾರ ಮೆಳ್ಳಹಳ್ಳಿಗೇಟ್ ಬಳಿ ಆದರ್ಶ ಶಾಲೆಯನ್ನು ಪ್ರಾರಂಭಿಸಿರುವುದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಿದೆ. ಆದರೆ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳು ಮಾತ್ರ ಸರಿಯಾದ ಬಸ್ ವ್ಯವಸ್ಥೆಯಿಲ್ಲದೆ ಕಷ್ಟ ಅನುಭವಿಸುವಂತಾಗಿದೆ.
ಇನ್ನಾದರೂ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಇತ್ತ ಗಮನಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ಬಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕಾದ ಅಗತ್ಯವಿದೆ.