News Kannada
Tuesday, October 04 2022

ಕರ್ನಾಟಕ

ಕಾಂಗ್ರೆಸ್ ನಲ್ಲಿ ತುರ್ತು ಪರಿಸ್ಥಿತಿ: ಸಿಎಂ ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ವಾಗ್ಧಾಳಿ - 1 min read

Photo Credit :

ಕಾಂಗ್ರೆಸ್ ನಲ್ಲಿ ತುರ್ತು ಪರಿಸ್ಥಿತಿ: ಸಿಎಂ ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ವಾಗ್ಧಾಳಿ

ಮಡಿಕೇರಿ: ರಾಜಕೀಯ ಪಕ್ಷಗಳಿಗೆ ಜನರೇ ಮಾಲೀಕರು, ಆದರೆ ಕಾಂಗ್ರೆಸ್ ಪಕ್ಷದಲ್ಲಿ ನಾಯಕರುಗಳೇ ಮಾಲೀಕರಾಗುವ ಮೂಲಕ ಆಂತರಿಕ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ಮಾಜಿ ಸಂಸದ ಅಡಗೂರು ಹೆಚ್.ವಿಶ್ವನಾಥ್ ಕಾಂಗ್ರೆಸ್ ನಾಯಕತ್ವದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ.

ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ನಡೆದ ವಿಶ್ವನಾಥ್ ವಿಶ್ವಾಸಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಸಂಪೂರ್ಣವಾಗಿ ನಾಶವಾಗಿದ್ದು, ತುರ್ತು ಪರಿಸ್ಥಿತಿ ಎದುರಾಗಿರುವುದರಿಂದ ಪ್ರಾಮಾಣಿಕ ಕಾರ್ಯಕರ್ತರಿಗೆ ಆಘಾತವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಳೆದ ನಲವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಾಗಿ ಬದ್ಧತೆಯನ್ನು ಪ್ರದರ್ಶಿಸಿದ್ದೇನೆ. ನನ್ನ ನೇರ ಮಾತನ್ನು ಕೇಳಲಾಗದ ನಾಯಕತ್ವ ಸೂಕ್ಷ್ಮ ಪರಿಸ್ಥಿತಿಯಲ್ಲಿದೆ. ಕಾಂಗ್ರೆಸ್ ಪಕ್ಷ ಒಬ್ಬ ವ್ಯಕ್ತಿಯ ಆಸ್ತಿಯಲ್ಲ, ಜನರೇ ಪಕ್ಷದ ಆಸ್ತಿ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪಕ್ಷದ ನಾಯಕರಲ್ಲ ಎಂದು ನೇರವಾಗಿ ಹೇಳಿದ್ದೇ ಕೆಲವರಿಗೆ ಹಿಡಿಸಲಿಲ್ಲವೆಂದು ವಿಶ್ವನಾಥ್ ಮಾರ್ಮಿಕವಾಗಿ ನುಡಿದರು.

ಜನರು ಕಟ್ಟಿದ ಕಾಂಗ್ರೆಸ್ ಪಕ್ಷದಲ್ಲಿ ನಾಯಕರಷ್ಟೇ ಇರಬೇಕೆ ಹೊರತು ಯಾರು ಮಾಲೀಕತ್ವವನ್ನು ಹೊಂದಬಾರದು. ಇದನ್ನು ಪ್ರಾಮಾಣಿಕ ಕಾರ್ಯಕರ್ತರು ಸ್ವೀಕಾರ ಮಾಡುವುದಿಲ್ಲವೆಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷರು, ಎಐಸಿಸಿ ವೀಕ್ಷಕರು, ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಯಾರು ಕೂಡ ಪಕ್ಷದ ಸ್ಥಿತಿಗತಿಯ ಬಗ್ಗೆ ಮಾತನಾಡದ ಪರಿಸ್ಥಿತಿಯಲ್ಲಿದ್ದಾರೆ. ಕಾಂಗ್ರೆಸ್ ದೇಶವನ್ನು ಬದುಕಿಸಿದೆ, ಈ ಬದ್ಧತೆಯನ್ನು ಕಸಿದುಕೊಳ್ಳುವ ಪ್ರಯತ್ನ ಕೆಲವರಿಂದ ನಡೆಯುತ್ತಿದೆ. ರಾಜ್ಯ ಸರ್ಕಾರ ಕಾಂಗ್ರೆಸ್ ಸಿದ್ದಾಂತದ ರೂಪದಲ್ಲಿ ಆಡಳಿತ ನಡೆಸುತ್ತಿಲ್ಲವೆಂದು ವಿಶ್ವನಾಥ್ ಟೀಕಿಸಿದರು.

ಕಾಂಗ್ರೆಸ್ ಪಕ್ಷ ನನ್ನ ತಾಯಿಯಾಗಿದ್ದು, ತಾಯಿಗೆ ವಿದಾಯ ಹೇಳುವ ವಿಷಾದದ ಪರಿಸ್ಥಿತಿ ಎದುರಾಗಿದೆ. ಈ ರೀತಿಯ ದುಸ್ಥಿತಿಗೆ ಕಾಂಗ್ರೆಸ್ನ ನಾಯಕತ್ವದ ದಿವಾಳಿತನವೇ ಕಾರಣವೆಂದು ಅಭಿಪ್ರಾಯಪಟ್ಟರು. ಕಾಂಗ್ರೆಸ್ ಸರ್ಕಾರದ ನಡಾವಳಿಕೆಯನ್ನು ನಾನು ಪ್ರಶ್ನೆ ಮಾಡುತ್ತಿದ್ದೇನೇಯೇ ಹೊರತು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲವೆಂದು ಸ್ಪಷ್ಟಪಡಿಸಿದರು.

ನಾನು ಕಾಂಗ್ರೆಸ್ ಪಕ್ಷವನ್ನು ಬಿಡುವ ನಿರ್ಧಾರವನ್ನು ಕೈಗೊಂಡರು ಯಾರೂ ನನ್ನನ್ನು ವಿಚಾರಿಸಲಿಲ್ಲ, ಇದು ನಾಯಕತ್ವದ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಉಪಚುನಾವಣೆಯ ಪ್ರಚಾರ ಸಂದರ್ಭ ಸ್ಟಾರ್ ಪ್ರಚಾರಕನಾದ ನನ್ನನ್ನು ಕಡೆಗಣಿಸಿ ಆ ಸ್ಥಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರನನ್ನು ನೇಮಿಸಿದರು. ಇಂತಹ ಬೆಳವಣಿಗೆಯನ್ನು ಸಹಿಸಲು ಹೇಗೆ ಸಾಧ್ಯವೆಂದು ವಿಶ್ವನಾಥ್ ಪ್ರಶ್ನಿಸಿದರು. ಕಳೆದ ಮೂವತ್ತು ವರ್ಷಗಳಿಂದ ಎಐಸಿಸಿ ಸದಸ್ಯನಾಗಿರುವ ನನ್ನನ್ನು ಬಿಟ್ಟು ಎಐಸಿಸಿ ಸಭೆ ನಡೆಸಲಾಯಿತು. ಕಾರಣ ಕೇಳಿದರೇ ಕೆಪಿಸಿಸಿ ಅಧ್ಯಕ್ಷರು ಮುಖ್ಯಮಂತ್ರಿಗಳು ಹೇಳಿದರು ಎಂದು ಸಮಜಾಯಿಷಿಕೆ ನೀಡುತ್ತಾರೆ. ಮುಖ್ಯಮಂತ್ರಿ ಕಾಂಗ್ರೆಸ್ ಪಕ್ಷ ಆರಿಸಿದ ನಾಯಕನೇ ಹೊರತು ಮುಖ್ಯಮಂತ್ರಿಯೇ ಕಾಂಗ್ರೆಸ್ ಪಕ್ಷವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದಲ್ಲಿರುವ ಮಂತ್ರಿಗಳು ಏಳಿಗೆ ಇಲ್ಲದವರೆಂದು ಟೀಕಿಸಿದ ವಿಶ್ವನಾಥ್, ಈಗಿನ ಎಐಸಿಸಿ ವೀಕ್ಷಕ ವೇಣುಗೋಪಾಲ್ ಅವರು ಯಾವುದೇ ಪ್ರಯೋಜನ ಇಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದೆ ಇದ್ದ ವೀಕ್ಷಕ ದಿಗ್ವಿಜಯ ಸಿಂಗ್ ಸೂಟ್ಕೇಸ್ ಅಬ್ಸರ್ರ್ವರ್ ಆಗಿದ್ದರೆಂದು ವಿಶ್ವನಾಥ್ ಆರೋಪಿಸಿದರು.

See also  ತಲಕಾವೇರಿ ಕ್ಷೇತ್ರದಲ್ಲಿ ದೋಷವಿಲ್ಲ: ಗ್ರಾಮಸ್ಥರ ಸ್ಪಷ್ಟನೆ

ನಾನು ದಂಧೆಕೋರನಲ್ಲ: ನಾನು ರಾಜಕೀಯವಾಗಿ ಪರಿಶುದ್ಧವಾಗಿರುವುದರಿಂದ ಯಾರಿಗೂ ಹೆದರುವುದಿಲ್ಲ. ಮರಳುದಂಧೆ, ಗಣಿದಂಧೆ, ರಿಯಲ್ ಎಸ್ಟೇಟ್ ದಂಧೆ, ವರ್ಗಾವಣೆ ದಂಧೆಗಳಲ್ಲಿ ನಾನಾಗಲಿ, ನನ್ನ ಮಕ್ಕಳಾಗಲೀ ತೊಡಗಿಸಿಕೊಂಡಿಲ್ಲ. ಹಣ ಇಟ್ಟುಕೊಂಡು ಚುನಾವಣೆ ಎದುರಿಸಿದವನು ನಾನಲ್ಲ, ನನಗೆ ಸಿಕ್ಕಿದ ಅಧಿಕಾರವನ್ನು ಅನುಭವಿಸದೇ ಜನಪರವಾದ ಕೆಲಸವನ್ನು ನಿರ್ವಹಿಸಿದ್ದೇನೆ ಎಂದು ವಿಶ್ವನಾಥ್ ಸಮರ್ಥಿಸಿಕೊಂಡರು.

ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬರುವ ಮೊದಲು ಹಿಂದಿನ ಸರ್ಕಾರದ ಭ್ರಷ್ಟಾಚಾರವನ್ನು ತೊಡೆದು ಹಾಕುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಈ ಸರ್ಕಾರ ಭ್ರಷ್ಟಾಚಾರವನ್ನೇ ಹೊದ್ದು ಮಲಗಿದೆ ಎಂದು ಆರೋಪಿಸಿದರು.

ಗೌರವ ಇಲ್ಲದ ಕಡೆ ಇರುವುದು ಕ್ಷೇಮವಲ್ಲ, ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿ ಗೌರವಯುತವಾಗಿ ನಿರ್ಗಮಿಸುವುದು ನನ್ನ ಬಯಕೆ. ಇದೇ ಕಾರಣಕ್ಕೆ ಪಕ್ಷ ಬಿಡುವ ನಿರ್ಧಾರವನ್ನು ಕೈಗೊಂಡಿರುವುದಾಗಿ ವಿಶ್ವನಾಥ್ ಸ್ಪಷ್ಟಪಡಿಸಿದರು. ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದು, ಮುಂದಿನ ನಿರ್ಧಾರದ ಕುರಿತು ಹಿತೈಷಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದೆಂದು ಹೇಳಿದರು. ನನ್ನೊಂದಿಗೆ ಬನ್ನಿ ಎಂದು ಯಾರನ್ನೂ ಆಹ್ವಾನಿಸುವುದಿಲ್ಲ, ನನ್ನ ಸ್ನೇಹಿತರು ಯಾವುದೇ ಪಕ್ಷದಲ್ಲಿದ್ದರೂ ಸ್ನೇಹಿತರೇ ಎಂದು ವಿಶ್ವನಾಥ್ ಹೇಳಿದರು.

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ, ಮಾತೃಪಕ್ಷ ಕಾಂಗ್ರೆಸ್ನಿಂದ ನನಗೆ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ಬಗ್ಗೆ ಅಸಮಾಧಾನವಿದ್ದು, ವಿಶ್ವನಾಥ್ ಅವರ ಸಹಕಾರದಿಂದ ಅಧಿಕಾರ ಹೊಂದಿರುವವರು ಪಕ್ಷ ಸಂಘಟನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಜಿಲ್ಲಾ ಕಾಂಗ್ರೆಸ್ನ ಅನೇಕರಿಗೆ ಭಿನ್ನಾಭಿಪ್ರಾಯಗಳಿವೆ, ಆದರೆ ಯಾರೂ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗಿಲ್ಲ. ವಿಶ್ವನಾಥ್ ಅವರ ಅಭಿಮಾನಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಕಾಂಗ್ರೆಸ್ನ್ನು ಕೊಲ್ಲುವ ನಾಯಕರು ಇರುವವರೆಗೆ ಕೊಡಗು ಕಾಂಗ್ರೆಸ್ ನಿಷ್ಕ್ರೀಯವಾಗಿಯೇ ಇರಲಿದೆ ಎಂದು ಕೆ.ಎಂ.ಗಣೇಶ್ ಟೀಕಿಸಿದರು.

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು, ಅರೆಭಾಷೆ ಅಕಾಡೆಮಿ ಅಧ್ಯಕ್ಷರು, ಕೆಎಸ್ಆರ್ಟಿಸಿ ನಿರ್ದೇಶಕರಿಗೆ ಅಧಿಕಾರ ನೀಡಿದ್ದು ವಿಶ್ವನಾಥ್ ಅವರು. ತಳಮಟ್ಟದ ಕಾರ್ಯಕರ್ತರನ್ನು ಬೆಳೆಸಿದ ಪ್ರಾಮಾಣಿಕ ರಾಜಕಾರಣಿ ಇವರಾಗಿದ್ದು, ವಿಶ್ವನಾಥ್ ಅವರ ನಿಲುವಿಗೆ ನಾವು ಬದ್ಧರಾಗಿದ್ದೇವೆ ಎಂದು ಗಣೇಶ್ ಘೋಷಿಸಿದರು.

ಸಭೆಯಲ್ಲಿ ಮಾಜಿ ಶಾಸಕರಾದ ಹೆಚ್.ಡಿ.ಬಸವರಾಜು ಹಾಗೂ ಸೋಮವಾರಪೇಟೆ ಪಟ್ಟಣ ಪಂಚಾಯ್ತಿ ಸದಸ್ಯ ಕೆ.ಎ.ಆದಮ್ ಮಾತನಾಡಿದರು.

ನಗರಸಭಾ ಸದಸ್ಯರುಗಳಾದ ಶ್ರೀಮತಿ ಬಂಗೇರಾ, ವೀಣಾಕ್ಷಿ, ಲೀಲಾ ಶೇಷಮ್ಮ, ಮೂಡಾ ಮಾಜಿ ಅಧ್ಯಕ್ಷರಾದ ಸುರಯ್ಯಾ ಅಬ್ರಾರ್, ಅಲ್ಪಸಂಖ್ಯಾತರ ಘಟಕದ ಮಡಿಕೇರಿ ಅಧ್ಯಕ್ಷ ಮ್ಯಾಥ್ಯು, ಕಾರ್ಯದರ್ಶಿ ಜಯರಾಜ್, ವಿಕಲಚೇತನ ಘಟಕದ ರಾಜ್ಯಾಧ್ಯಕ್ಷ ಡಿ.ಕೆ.ಸುರೇಶ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಎ.ಲಾರೆನ್ಸ್, ಪ್ರಮುಖರಾದ ತಾಕೇರಿ ಸತೀಶ್, ಸೂದನ ಈರಪ್ಪ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು