ಮಡಿಕೇರಿ: ಕೊಡಗಿನಲ್ಲಿ ಮಳೆ ನಿಧಾನವಾಗಿ ಬಿರುಸುಗೊಳ್ಳತೊಡಗಿದೆ. ಕಳೆದೆರಡು ವರ್ಷಗಳಿಂದ ಮಳೆ ಕ್ಷೀಣಿಸಿತ್ತಾದರೂ ಈ ಬಾರಿ ಜನವರಿಯಿಂದ ಇಲ್ಲಿಯವರೆಗೆ ವಾಡಿಕೆಯ ಮಳೆಯಾಗದಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಮಳೆಯಾಗಿರುವುದು ಕಂಡು ಬಂದಿದೆ.
ಜನವರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಮಳೆ ಸುರಿದಿರುವುದನ್ನು ನೋಡಿದರೆ ಸರಾಸರಿ 503 .ಮಿಲಿಮೀಟರ್ ಮಳೆಯಾಗಿದೆ. ಕಳೆದ ವರ್ಷ ಬೇಸಿಗೆಯಲ್ಲಿ ಮಳೆಯಾಗದೆ ಜನ ಪರದಾಡುವಂತಾಗಿತ್ತು. ಕಳೆದವರ್ಷ ಈ ಅವಧಿಗೆ 342 ಮಿ.ಮೀ. ಮಳೆಯಾಗಿತ್ತು. ಕಳೆದ ವರ್ಷ ಮತ್ತು ಈ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಸುಮಾರು 161 ಮಿ.ಮೀ.ನಷ್ಟು ಮಳೆಯಾಗಿರುವುದನ್ನು ಕಾಣಬಹುದು.
ಹಾಗೆ ನೋಡಿದರೆ ಕೊಡಗಿನಲ್ಲಿ ಆಗೊಮ್ಮೆ, ಈಗೊಮ್ಮೆ ಮಳೆ ಬರುತ್ತಿದೆಯಾದರೂ ಅದರಿಂದ ಯಾವುದೇ ಪ್ರಯೋಜನವಾದಂತೆ ಕಾಣುತ್ತಿಲ್ಲ. ಭತ್ತದ ಕೃಷಿ ಮಾಡುವವರಿಗೆ ಇಷ್ಟರಲ್ಲೇ ಮಳೆ ಸುರಿದು ಹೊಳೆ, ತೋಡು ತುಂಬಿ ಹರಿಯಬೇಕಾಗಿತ್ತು. ಆದರೆ ಇನ್ನೂ ಕೂಡ ನೀರು ಹೆಚ್ಚಿನ ಪ್ರಮಾಣದಲ್ಲಿ ಕಾಣುತ್ತಿಲ್ಲ. ಕೆಲವರು ಹೊಳೆ, ತೋಡಿನಿಂದ ನೀರು ಬಳಸಿಕೊಂಡು ಭತ್ತದ ಸಸಿ ಮಡಿ ತಯಾರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಇನ್ನೂ ಕೂಡ ಹಲವು ಕೃಷಿಕರು ಗದ್ದೆಯತ್ತ ಮುಖ ಮಾಡಿಲ್ಲ. ಹಿಂದಿನ ದಿನಗಳಿಗೆ ಹೋಲಿಸಿದರೆ ಭತ್ತದ ಕೃಷಿಯತ್ತ ಎಲ್ಲರೂ ನಿರಾಸೆ ತಾಳುತ್ತಿದ್ದಾರೆ. ಅದರಲ್ಲೂ ಕಳೆದೆರಡು ವರ್ಷಗಳಿಂದ ಸಮರ್ಪಕವಾಗಿ ಮಳೆ ಬಾರದೆ ಭತ್ತದ ಕೃಷಿ ಮಾಡಲು ಸಾಧ್ಯವಾಗಿಲ್ಲ. ಇನ್ನು ಕೆಲವರು ಇತರೆ ಕೃಷಿಗೆ ಗದ್ದೆಯನ್ನು ಬಳಸಿಕೊಂಡಿದ್ದಾರೆ. ಈ ಬಾರಿ ಉತ್ತಮ ಮಳೆಯಾಗಬಹುದು ಎಂಬ ನಿರೀಕ್ಷೆ ಜನರದ್ದಾಗಿದೆ. ಆದರೆ ಈಗಾಗಲೇ ಮುಂಗಾರು ಆರಂಭವಾಗಿದ್ದರೂ ಬಿರುಸು ಪಡೆದುಕೊಳ್ಳದ ಕಾರಣದಿಂದ ರೈತರಿಗೆ ಭಯ ಆರಂಭವಾಗಿದೆ.
ಇದರ ಜೊತೆಗೆ ಕಾವೇರಿಯನ್ನೇ ನಂಬಿಕೊಂಡಿರುವ ಕಾವೇರಿ ಕಣಿವೆಯ ಜನ ಕೂಡ ಆತಂಕದಲ್ಲಿದ್ದಾರೆ. ಕೊಡಗಿನಲ್ಲಿ ಮಳೆಯಾದರೆ ಮಾತ್ರ ಕಾವೇರಿ ತುಂಬಿ ಹರಿಯಲು ಸಾಧ್ಯ. ಆದರೆ ಈಗಾಗಲೇ ತಳ ತಲುಪಿರುವ ಜಲಾಶಯದ ನೀರು ಮೇಲೆ ಬರಬೇಕಾದರೆ ಮಳೆ ಬರಲೇ ಬೇಕು. ಆದರೆ ಕೊಡಗಿನಲ್ಲಿ ಮಳೆ ತಾಲೂಕುವಾರು ನೋಡಿದರೆ ಸುರಿಯುತ್ತಿರುವುದು ಕಡಿಮೆಯೇ. ಮಡಿಕೇರಿ ತಾಲೂಕಿನಲ್ಲಿ. ಜನವರಿಯಿಂದ ಇಲ್ಲಿಯವರೆಗಿನ ಮಳೆ 642.85 ಮಿ.ಮೀ ಮಳೆಯಾಗಿದ್ದರೆ ಕಳೆದ ವರ್ಷ ಇದೇ ಅವಧಿಯಲ್ಲಿ 550.39 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲೂಕಿನಲ್ಲಿ ಕಳೆದ ವರ್ಷ ಇದೇ ದಿನ 2.4 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 454.62 ಮಿ.ಮೀ. ಆಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 263.57 ಮಿ.ಮೀ ದಿನ ಸರಾಸರಿ ಮಳೆ 0.00 ಮಿ.ಮೀ. ಕಳೆದ ವರ್ಷ ಇದೇ ದಿನ 3.5 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 390.47 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 212.04 ಮಿ.ಮೀ. ಮಳೆಯಾಗಿತ್ತು. ಮುಂದಿನ ದಿನಗಳಲ್ಲಿ ಮಳೆ ಬಿರುಸುಗೊಂಡು ವಾಡಿಕೆಯ ಮಳೆ ಸುರಿದರೆ ಮಾತ್ರ ಎಲ್ಲರೂ ನೆಮ್ಮದಿಯಾಗಿರಲು ಸಾಧ್ಯ ಇಲ್ಲವಾದರೆ ಮತ್ತೆ ನೀರಿಗೆ ಸಂಕಷ್ಟ ಎದುರಾಗುವುದರಲ್ಲಿ ಸಂಶಯವಿಲ್ಲ.