ಚಾಮರಾಜನಗರ: ಅರಣ್ಯದಿಂದ ಶ್ರೀಗಂಧ ಮರವನ್ನು ಕಡಿದು ಅದನ್ನು ತುಂಡುಗಳನ್ನಾಗಿ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳಿಬ್ಬರನ್ನು ಅರಣ್ಯಾಧಿಕಾರಿಗಳು ಮಾಲು ಸಹಿತ ಬಂಧಿಸಿದ್ದಾರೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಆಡಿನಕಣಿವೆಯ ಮುರುಗನ್(21) ಹಾಗೂ ತಾಲೂಕಿನ ಭೀಮನಬೀಡು ಗ್ರಾಮದ ವೃದ್ಧೆ ಸುಬ್ಬಮ್ಮ(70) ಬಂಧಿತರಾಗಿದ್ದಾರೆ. ಇವರಿಬ್ಬರು ಆನೆದಂತ, ಶ್ರೀಗಂಧ ಮಾರಾಟ ದಂಧೆಯ ಜಾಲದೊಂದಿಗೆ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಬಂಡೀಪುರ ಅರಣ್ಯ ವಲಯದಿಂದ ಬೆಲೆಬಾಳುವ ಶ್ರೀಗಂಧವನ್ನು ಕಡಿದು ಕೇರಳದ ಕಳ್ಳರಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಸುಬ್ಬಮ್ಮ ವೃದ್ಧೆಯಾಗಿದ್ದರೂ ಇದೇ ವೃತ್ತಿಯನ್ನು ಮಾಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಕಳೆದ ಆರು ತಿಂಗಳ ಹಿಂದೆ ಓಂಕಾರ ವಲಯದಲ್ಲಿ ಸಾವಿಗೀಡಾಗಿದ್ದ ಆನೆಯ ಕೊಂಬು ಮಾರಾಟ ಮಾಡುವಾಗ ಸಿಕ್ಕಿ ಬಿದ್ದು ಸುಬ್ಬಮ್ಮ ಬಂಧನಕ್ಕೊಳಗಾಗಿದ್ದಳು.
ಆದರೂ ಕಳ್ಳತನವನ್ನು ಬಿಟ್ಟಿರಲಿಲ್ಲ. ಈ ನಡುವೆ ಶ್ರೀಗಂಧ ಮರವನ್ನು ಕಡಿದು ಅದರ ತಿರುಳನ್ನು ತೆಗೆದು ಆರು ತುಂಡುಗಳನ್ನಾಗಿ ಮಾಡಿದ ಸುಮಾರು ಐದು ಕೆಜಿಯಷ್ಟು ಗಂಧವನ್ನು ಮಾರಾಟ ಮಾಡಲು ಮುರುಗನ್ ಟೈಗರ್ ರಿಂಚ್ ರೆಸಾರ್ಟ್ ನಿಂದ ಭೀಮನಬೀಡು ಗ್ರಾಮಕ್ಕೆ ತೆರಳುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಸುಬ್ಬಮ್ಮನ ಮನೆ ಮೇಲೆ ದಾಳಿ ಮಾಡಿದ್ದು, ಈ ವೇಳೆ ಸುಬ್ಬಮ್ಮ ಹಾಗೂ ಮುರುಗನ್ ಮಾಲು ಸಹಿತ ಸಿಕ್ಕಿ ಬಿದ್ದಿದ್ದಾರೆ.
ಆ ನಂತರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ವಲಯಾರಣ್ಯಾಧಿಕಾರಿಗಳಾದ ನವೀನ್ ಕುಮಾರ್, ಮುಕುಂದ, ಸಿಬ್ಬಂದಿ ನೇತ್ರಾವತಿ, ಸವಿತಾ, ದಿಲೀಪಕುಮಾರ್, ಹರೀಶ್, ರವಿಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು.