ಚಾಮರಾಜನಗರ: ಗುಂಡ್ಲುಪೇಟೆಯ ಕೆಲವು ಗ್ರಾಮ ಪಂಚಾಯಿತಿಗಳು ಸಮಯಕ್ಕೆ ಸರಿಯಾಗಿ ಬಾಗಿಲು ತೆರೆದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಸಮಯದ ಪರಿಪಾಲನೆ ಮಾಡದೆ ಸಮಯವಲ್ಲದ ಸಮಯದಲ್ಲಿ ಬಾಗಿಲು ತೆರೆಯುವುದು, ಮುಚ್ಚುವುದು ಮಾಡುತ್ತಿರುವುದರಿಂದ ಕೆಲಸದ ನಿಮಿತ್ತ ಗ್ರಾಪಂ ಕಚೇರಿಗೆ ತೆರಳುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬುದು ಗ್ರಾಮದ ಜನರ ಅಳಲಾಗಿದೆ.
ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಮತ್ತು ಕೂತನೂರು ಗ್ರಾಮಪಂಚಾಯಿತಿಯ ಕಚೇರಿ ಬಾಗಿಲನ್ನು ಕೆಲವು ದಿನಗಳ ಹಿಂದೆ ಮೂರು ದಿನಗಳ ಕಾಲ ಮುಚ್ಚಲಾಗಿತ್ತು. ಪಿಡಿಓ ಕಚೇರಿಗೆ ಬಾರದ್ದರಿಂದ ಬಾಗಿಲು ಹಾಕಲಾಗಿತ್ತು. ಇದರಿಂದ ಕಚೇರಿ ಕೆಲಸಕ್ಕೆ ಬಂದ ಸಾರ್ವಜನಿಕರು ಬರಿಕೈನಲ್ಲಿ ಮನೆಗೆ ಹಿಂತಿರುಗುವಂತಾಯಿತು. ಈ ಬಗ್ಗೆ ವಿಚಾರಿಸಿದರೆ ಯಾರಿಂದಲೂ ಸಮರ್ಪಕವಾಗಿ ಉತ್ತರ ದೊರೆಯುತ್ತಿಲ್ಲ. ಇನ್ನೊಂದೆಡೆ ಭೀಮನಬೀಡು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿಗಾಗಿ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿಣವಾಗಿದೆ. ಈ ಬಗ್ಗೆ ಗ್ರಾಪಂ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ.
ಪಿಡಿಓ ಕಚೇರಿಗೆ ಬಾರದಿದ್ದರೆ ನೌಕರರು ಕೂಡ ಬಾಗಿಲು ಮುಚ್ಚಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಗ್ರಾಮಪಂಚಾಯಿತಿ ಕಛೇರಿಯನ್ನು ಮಧ್ಯಾಹ್ನ 2 ಘಂಟೆಯಾದರೂ ತೆರೆಯದಿದ್ದಾಗ ಏಕೆ ತೆರೆದಿಲ್ಲ ಎಂದು ದೂರವಾಣಿ ಮೂಲಕ ಪಂಚಾಯಿತಿ ನೌಕರರನ್ನು ಗ್ರಾಮಸ್ಥರು ವಿಚಾರಿಸಿದಾಗ ಪಿಡಿಓ ಕಚೇರಿಗೆ ಬಾರದ್ದು ಬೆಳಕಿಗೆ ಬಂದಿತ್ತು.
ಆ ನಂತರ ವಿಷಯ ಅರಿತ ಪಿಡಿಓ ಬಾಗಿಲು ತೆರೆಯುವಂತೆ ಕಚೇರಿ ನೌಕರರಿಗೆ ಸೂಚಿಸಿದ್ದಾರೆ. ಆದರೂ ಕೂಡ ನೌಕರರು ಬಾಗಿಲು ತೆರೆಯದೆ ಇದ್ದಾಗ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗೆ ದೂರವಾಣಿ ಮೂಲಕ ವಿಚಾರ ತಿಳಿಸಿ ಬಾಗಿಲು ತೆರೆದ ಘಟನೆಯೂ ನಡೆದಿತ್ತು. ಇದೀಗ ಮೇಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಮತ್ತೆ ಆ ರೀತಿಯ ಘಟನೆ ಮರುಕಳಿಸಿಲ್ಲ ಎಂಬುದಾಗಿ ಗ್ರಾಮಸ್ಥರು ಹೇಳುತ್ತಿದ್ದಾರೆ.