ಮಂಡ್ಯ: ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯನ್ನು ಪುಸಲಾಯಿಸಿ ಬೈಕ್ಗೆ ಹತ್ತಿಸಿಕೊಂಡು ಬಳಿಕ ಬಲತ್ಕಾರವಾಗಿ ಅತ್ಯಾಚಾರವೆಸಗಿದ್ದ ಆರೋಪಿಯನ್ನು ನಾಗಮಂಗಲ ಪೊಲೀಸರು ಬಂಧಿಸಿದ್ದಾರೆ.
ಜೂ.19ರಂದು ಮಹಿಳೆಯೊಬ್ಬರು ತನ್ನ ಗ್ರಾಮಕ್ಕೆ ತೆರಳಲು ಬಸ್ಸಿಗೆ ಕಾಯುತ್ತಿದ್ದರು. ಇದೇ ವೇಳೆ ಅಲ್ಲಿಗೆ ಆಗಮಿಸಿದ ನಾಗಮಂಗಲ ತಾಲೂಕಿನ ಸಿದ್ದಾಪುರ ಪಾಳ್ಯದ ನಿವಾಸಿ ಯೋಗೇಶ್(38) ಎಂಬಾತ ಆಕೆಯನ್ನು ಪರಿಚಯಿಸಿಕೊಂಡು ಆ ಕಡೆಯಿಂದಲೇ ಹೋಗುವುದಾಗಿ ಹೇಳಿ ಪುಸಲಾಯಿಸಿ ತನ್ನ ಬೈಕ್ ಗೆ ಹತ್ತಿಸಿಕೊಂಡಿದ್ದನು. ಬಳಿಕ ಆಕೆಯ ಗ್ರಾಮಕ್ಕೆ ಕರೆದೊಯ್ಯದೆ ಬೆಳ್ಳೂರು ಹೋಬಳಿಯ ಚುಂಚನಹಳ್ಳಿ ಗ್ರಾಮದ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದನು. ಆಕೆ ಪ್ರತಿಭಟಿಸಿದರೂ ಬಿಡದೆ ಬಲತ್ಕಾರವಾಗಿ ಅತ್ಯಾಚಾರವೆಸಗಿ ಬಳಿಕ ಪರಾರಿಯಾಗಿದ್ದನು. ಅತ್ಯಾಚಾರಕ್ಕೀಡಾದ ಮಹಿಳೆ ನೀಡಿದ ದೂರನ್ನು ದಾಖಲಿಸಿಕೊಂಡಿದ್ದ ನಾಗಮಂಗಲ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದರು. ಆರೋಪಿ ಮಾತ್ರ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡು ತಿರುಗುತ್ತಿದ್ದನು.
ಈ ನಡುವೆ ಆರೋಪಿ ಯೋಗೇಶ್ ಹಾಸನ-ಬೆಂಗಳೂರು ರೈಲ್ವೆ ಹಳಿಯಿರುವ ಕದಬಹಳ್ಳಿ ಬಳಿಯ ಮೇಲ್ಸೇತುವೆ ಬಳಿ ಇರುವುದನ್ನು ಖಚಿತಪಡಿಸಿಕೊಂಡು ಕಾರ್ಯಾಚರಣೆ ನಡೆಸಿದ್ದು, ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಆರೋಪಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಆತನನ್ನು ನ್ಯಾಯಾಯಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.