ಮಂಡ್ಯ: ಬೆಳಗಾವಿಯಲ್ಲಿ ಜಾರಿಗೊಳಿಸಲಾಗಿರುವ ಚೆನ್ನಮ್ಮ ಪಡೆಯ ರೀತಿ ಮಹಿಳೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲೆಯಲ್ಲೂ ವಿಶೇಷ ಮಹಿಳಾ ಪೊಲೀಸ್ ಪಡೆ ರಚನೆ ಮಾಡಲಾಗುವುದು ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಅವರು ಪೊಲೀಸ್ ಇಲಾಖೆಯನ್ನು ಜನಸ್ನೇಹಿಯನ್ನಾಗಿ ಮಾಡುವುದೇ ಗುರಿಯಾಗಿದ್ದು, ಜಿಲ್ಲೆಯಲ್ಲಿ ನಡೆಯುತ್ತಿರುವ ಅಪರಾಧ, ಅಪಘಾತ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಕ್ರಮ ಕೈಗೊಳ್ಳಲಾಗುವುದು. ಕಾನೂನು ಬಾಹಿರ ಕೃತ್ಯಗಳ ತಡೆಗೆ ನಿಗಾ ವಹಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನು ಪೊಲೀಸ್ ಇಲಾಖೆ ಜಾರಿಗೊಳಿಸಿರುವ ವಿಶೇಷ ಗಸ್ತು ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು. ಪ್ರದೇಶವಾರು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ಕಳ್ಳತನ ಸೇರಿದಂತೆ ಅಪರಾಧ ಪ್ರಕರಣಗಳನ್ನು ಹತ್ತಿಕ್ಕಲಾಗುವುದು. ಜತೆಗೆ ಕೆಳ ಹಂತದ ಪೊಲೀಸ್ ಸಿಬ್ಬಂದಿಯೊಂದಿಗೆ ಅಧಿಕಾರಿಗಳು ಉತ್ತಮ ಬಾಂಧವ್ಯ ಹೊಂದುವುದು, ನಾಗರಿಕರೊಂದಿಗೆ ಜನಸ್ನೇಹಿಯಾಗಿ ನಡೆದುಕೊಳ್ಳುವಂತಹ ವಾತಾವರಣ ನಿರ್ಮಿಸುವುದಾಗಿ ಹೇಳಿದ ಅವರು, ಶಾಲಾ-ಕಾಲೇಜುಗಳ ಸಮೀಪ, ಸಾರ್ವಜನಿಕ ಪ್ರದೇಶಗಳಲ್ಲಿ ಅಪರಾಧ ಪ್ರಕರಣಗಳನ್ನು ಹೇಗೆ ತಡೆಯುವುದು ಎಂಬುದರ ಕುರಿತಂತೆ ಇಲಾಖೆಯ ಸಿಬ್ಬಂದಿಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಕಾನೂನು ಸುವ್ಯವಸ್ಥೆ ಕುರಿತಂತೆ ಈ ಹಿಂದೆ ಜಿಲ್ಲೆಯಲ್ಲಿ ಆಡಳಿತ ನಡೆಸಿರುವ ಪೊಲೀಸ್ ವರಿಷ್ಠಾಧಿಕಾರಿಗಳು ಜಾರಿಗೆ ತಂದಿದ್ದ ನಿಯಮಗಳನ್ನು ಮುಂದುವರಿಸಲಾಗುವುದು. ಸಂಚಾರ ವ್ಯವಸ್ಥೆಯನು ಸುಗಮಗೊಳಿಸುವುದು, ಹೆದ್ದಾರಿಗಳಲ್ಲಿ ಅಪಘಾತಗಳನ್ನು ತಡೆಯುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಹೇಳಿದರು.
ಜಿ.ರಾಧಿಕಾ ಅವರು ಎರಡನೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದು, 2002ರಲ್ಲಿ ಮಾಲಿನಿ ಕೃಷ್ಣಮೂರ್ತಿ ಅವರು ಪ್ರಥಮ ಮಹಿಳಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ನಡೆಸಿದ್ದರು. ಮಾಲಿನಿ ಕೃಷ್ಣಮೂರ್ತಿ ಅವರು 22-07-2002 ರಿಂದ 19-07-2003ರ ವರೆಗೆ ಅಂದರೆ ಕೇವಲ ಒಂದು ವರ್ಷ ಮಾತ್ರ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ರಾಧಿಕಾ ಅವರು ಎರಡನೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.