ಚಾಮರಾಜನಗರ: ಸುಸಜ್ಜಿತ ಕಟ್ಟಡ, ಮಕ್ಕಳಿಗೆ ಕಲಿಯಲು ಅನುಕೂಲವಾಗುವಂತೆ ಬೃಹತ್ ಕೊಠಡಿ, ಪ್ರಯೋಗಾಲಯ, ಕಂಪ್ಯೂಟರ್, ಪ್ರತ್ಯೇಕ ಅಡುಗೆಮನೆ ಹೀಗೆ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಆದರ್ಶ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ನೆಮ್ಮದಿಯಾಗಿ ಕುಳಿತು ಪಾಠ ಕೇಳಲು ಪೀಠೋಪಕರಣಗಳೇ ಇಲ್ಲ ಎಂದರೆ ಅಚ್ಚರಿಯಾಗುತ್ತದೆ.
ಹಾಗೆ ನೋಡಿದರೆ ಸರ್ಕಾರಿ ಆದರ್ಶ ಶಾಲೆಯು ಎಸ್ಎಸ್ಎಲ್ಸಿಯಲ್ಲಿ ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆಯಿಲ್ಲದಂತೆ 2015ರಲ್ಲಿ ಉತ್ತಮ ಫಲಿತಾಂಶ ಪಡೆದಿದ್ದ ಶಾಲೆ ಬಳಿಕ ಶಿಕ್ಷಕರ ಹಾಗೂ ಮೂಲಭೂತ ಸೌಲಭ್ಯ ಕೊರತೆಯ ಕಾರಣದಿಂದ 2015ರಲ್ಲಿ ಶೇ.100 ಪಡೆದರೆ 2016ರಲ್ಲಿ ಶೇ. 98, 2017ರಲ್ಲಿ ಶೇ.92ಕ್ಕೆ ಇಳಿಕೆಯಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕೆನ್ನುವ ಉದ್ದೇಶದಿಂದ ಗುಂಡ್ಲುಪೇಟೆಯ ಚಿಕ್ಕತುಪ್ಪೂರು ಬಳಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿಯಲ್ಲಿ 4.36 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಯಿತು. ಇದಕ್ಕೂ ಮೊದಲು ಸುಮಾರು ಆರು ವರ್ಷಗಳ ಕಾಲ ಪಟ್ಟಣದ ಊಟಿ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡದಲ್ಲಿ ನಡೆಯುತ್ತಿತ್ತು. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಚಿಕ್ಕತುಪ್ಪೂರಿನಲ್ಲಿ ನಿರ್ಮಿಸಲಾದ ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದ್ದು, ಇಲ್ಲಿಯೇ ಪಾಠಪ್ರವಚನ ನಡೆಯುತ್ತಿದೆ.
ನೂತನ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಕಲಿಯಲು ಅನುಕೂಲವಾಗುವಂತೆ ವಿಶಾಲವಾದ ಪ್ರಾಂಗಣದಲ್ಲಿ ಸುಸಜ್ಜಿತ ಕೊಠಡಿಗಳು, ಪ್ರಯೋಗಾಲಯ, ಗ್ರಂಥಾಲಯ, ಕಂಪ್ಯೂಟರ್ ಕೊಠಡಿ, ಪ್ರತ್ಯೇಕ ಅಡುಗೆ ಮನೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆದರೆ ಸುಂದರ, ಸುಸಜ್ಜಿತ ಕಟ್ಟಡವನ್ನು ನಿರ್ಮಾಣ ಮಾಡಿದ ಸರ್ಕಾರ ಶಾಲೆಯ ವಿದ್ಯಾರ್ಥಿಗಳಿಗೆ ಕುಳಿತು ಪಾಠ ಕಲಿಯಲು ಅವಶ್ಯಕವಾದ ಪೀಠೋಪಕರಣಗಳನ್ನೇ ಒದಗಿಸಿಲ್ಲ ಎನ್ನುವುದೇ ನೋವಿನ ವಿಚಾರವಾಗಿದೆ.
ಇನ್ನೊಂದು ಸಮಸ್ಯೆ ಏನೆಂದರೆ ಶಾಲೆ ಪಟ್ಟಣದಿಂದ ಸುಮಾರು 2ಕಿ.ಮೀ. ದೂರದಲ್ಲಿರುವುದರಿಂದ ವಿದ್ಯಾರ್ಥಿಗಳು ಬಸ್ಸಿನಲ್ಲೇ ಓಡಾಡಬೇಕಾಗಿದ್ದು, ಚಾಮರಾಜನಗರಕ್ಕೆ ತೆರಳುವ ಬಸ್ಸನ್ನೇ ಆಶ್ರಯಿಸಬೇಕಾಗಿದೆ. ಹೀಗಾಗಿ ಬಸ್ಸಿಗಾಗಿ ಕಾಯುವುದು ವಿದ್ಯಾರ್ಥಿಗಳ ನಿತ್ಯದ ಸಮಸ್ಯೆಯಾಗಿದೆ. ಈ ಶಾಲೆಯಲ್ಲಿ ಸುಮಾರು 371 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಹಳೆಯ ಬೆಂಚು, ಡೆಸ್ಕ್ಗಳನ್ನು ಬಳಸಲಾಗಿದೆ. ಆದರೆ ಇದು ಎಲ್ಲ ತರಗತಿಗಳಿಗೆ ಇಲ್ಲದ ಕಾರಣ ಬಹುತೇಕ ವಿದ್ಯಾರ್ಥಿಗಳು ನೆಲದಲ್ಲಿ ಕುಳಿತುಕೊಂಡು ಪಾಠ ಕಲಿಯುವಂತಾಗಿದೆ. ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿಕೊಟ್ಟ ಸರ್ಕಾರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪೀಠೋಪಕರಣಗಳನ್ನು ಒದಗಿಸದಿರುವುದರಿಂದ ಬೆಳಗ್ಗಿನಿಂದ ಸಂಜೆವರೆಗೆ ನೆಲದಲ್ಲಿ ಕುಳಿತು ಪಾಠ ಕೇಳುವುದು ಅನಿವಾರ್ಯವಾಗಿದೆ.
ವಿದ್ಯಾರ್ಥಿಗಳಿದ್ದಾರೆ ಶಿಕ್ಷಕರಿಲ್ಲ!
ಈ ಶಾಲೆಗೆ ಸುಮಾರು 14 ಶಿಕ್ಷಕರ ಅಗತ್ಯವಿದೆಯಾದರೂ ಸದ್ಯ 9 ಶಿಕ್ಷಕರು ಮಾತ್ರ ಇರುವ ಕಾರಣದಿಂದಾಗಿ ಪ್ರತ್ಯೇಕ ಸೆಕ್ಷನ್ ನಲ್ಲಿ ಪಾಠ ಮಾಡಲು ತೊಂದರೆಯಾಗುವುದರಿಂದ ಒಂದೇ ಕೊಠಡಿಯಲ್ಲಿ ಕೂರಿಸಿಕೊಂಡು ಪಾಠ ಮಾಡಲಾಗುತ್ತಿದೆ. ಇನ್ನು ಶಾಲೆಗೆ ಕಾಂಪೌಂಡ್ ಮತ್ತು ಮೈದಾನವಿಲ್ಲದಿರುವುದು ಕೂಡ ಸಮಸ್ಯೆಯಾಗಿದೆ. ಶಾಲೆಯ ಸಮಸ್ಯೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಇಓ ಸಿ.ಎನ್.ರಾಜು ಅವರು ಶಾಲೆಗೆ ಅಗತ್ಯವಾದ ಕಂಪ್ಯೂಟರ್, ಪೀಠೋಪಕರಣಗಳು ಹಾಗೂ ಡೆಸ್ಕ್ ಗಳ ಸರಬರಾಜು ಪ್ರಕ್ರಿಯೆ ಮುಗಿದಿದ್ದು ಮುಂದಿನ ತಿಂಗಳಿನಲ್ಲಿ ಸರಬರಾಜಾಗಲಿವೆ. ಕೊರತೆಯಿರುವ ಶಿಕ್ಷಕ ಹುದ್ದೆಗಳಿಗೆ ನೇಮಕಾತಿ ನಡೆದಿದ್ದು ಕೆಲವೇ ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು ಈ ಸಾಲಿನಲ್ಲಿ ಅತಿ ಹೆಚ್ಚು ಫಲಿತಾಂಶ ನೀಡುವ ಗುರಿ ಹೊಂದಿರುವುದಾಗಿಯೂ ತಿಳಿಸಿದ್ದಾರೆ.
ನೂತನವಾಗಿ ಆಯ್ಕೆಯಾಗಿರುವ ಕ್ಷೇತ್ರದ ಶಾಸಕಿ ಗೀತಾಮಹದೇವಪ್ರಸಾದ್ ಈ ಶಾಲೆಯ ಬಗ್ಗೆ ಗಮನಹರಿಸಿ, ಮಕ್ಕಳಿಗೆ ಅಗತ್ಯವಿರುವ ಪೀಠೋಪಕರಣ ಹಾಗೂ ಶಿಕ್ಷಕರ ಕೊರತೆಯನ್ನು ನೀಗಿಸುತ್ತಾರಾ ಎಂಬುದನ್ನು ಕಾದುನೋಡ ಬೇಕಾಗಿದೆ.