ಮಡಿಕೇರಿ: ಈಗಾಗಲೇ ರಾಜ್ಯ ಹೆದ್ದಾರಿಯಾಗಿರುವ ಬೆಂಗಳೂರು ಮಾಣಿ ರಸ್ತೆ ಇನ್ಮುಂದೆ ರಾಷ್ಟ್ರೀಯ ಹೆದ್ದಾರಿಯಾಗುವ ಲಕ್ಷಣಗಳು ಕಂಡು ಬಂದಿದ್ದು ಇನ್ನೊಂದೆರಡು ವರ್ಷಗಳಲ್ಲಿ ಯೋಜನೆ ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದು ಸಕಾರಗೊಂಡಿದ್ದೇ ಆದರೆ ಬೆಂಗಳೂರಿನಿಂದ ಮೈಸೂರು, ಮೈಸೂರಿನಿಂದ ಮಡಿಕೇರಿ, ಮಡಿಕೇರಿಯಿಂದ ಮಾಣಿವರೆಗಿನ ಈಗಿನ ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಡಲಿದೆ.
ಮೂಲಗಳ ಪ್ರಕಾರ ಈ ಕುರಿತ ಯೋಜನೆ 2014ರಲ್ಲೇ ಸಿದ್ಧಗೊಂಡಿದೆ ಎಂದು ಹೇಳಲಾಗುತ್ತಿದ್ದು, ಬೆಂಗಳೂರು, ಮೈಸೂರು, ಮಡಿಕೇರಿ, ಮಾಣಿ ರಾಜ್ಯ ಹೆದ್ದಾರಿಯನ್ನು 275 ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ರಾಷ್ಟ್ರೀಯ ಹೆದ್ದಾರಿ ಇಲಾಖೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಈ ಸಂಬಂಧ ಅಧ್ಯಯನ ನಡೆಸಲು ಸೂಚನೆ ನೀಡಲಾಗಿದೆಯಂತೆ.
ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಖಾಸಗಿ ಏಜೆನ್ಸಿಗಳ ಮೂಲಕ ಬೆಂಗಳೂರಿನಿಂದ ಮಾಣಿಯವರೆಗೆ ಸರ್ವೇ ಮಾಡಲಿದ್ದು, ಈಗಿರುವ ರಾಜ್ಯ ಹೆದ್ದಾರಿಯನ್ನು ಯಾವ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನಾಗಿಸಬಹುದು? ಇದರ ಸಾಧಕ ಬಾಧಕಗಳು, ಇತರೆ ಮಾಹಿತಿಗಳನ್ನು ಕಲೆ ಹಾಕಿ ವರದಿ ತಯಾರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಿದ ಬಳಿಕ ಮುಂದಿನ ಪ್ರಕ್ರಿಯೆಗಳು ನಡೆಯಲಿದೆ.
ಇದು ಒಂದೆರಡು ದಿನಗಳಲ್ಲಿ ಆಗುವ ಕೆಲಸವಲ್ಲದ ಕಾರಣದಿಂದ ಈ ಬಗ್ಗೆ ತಜ್ಞರ ಸಮಿತಿ ವರ್ಷಗಳ ಕಾಲ ಅಧ್ಯಯನ ನಡೆಸಿ ಸಂಪೂರ್ಣ ಮಾಹಿತಿ ನೀಡ ಬೇಕಾಗುತ್ತದೆ. ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾದರೆ ಈಗಿನ ನಾಲ್ಕು ಪಥ, ಆರು ಪಥವಾಗಲಿದೆ. ಎರಡೂ ಬದಿಗಳಲ್ಲೂ ಎರಡೆರಡು ಪಥಗಳಲ್ಲಿ ಸರ್ವೀಸ್ ಲೈನ್ ಸೇರಿ ಒಟ್ಟು ಹತ್ತು ಪಥಗಳು ನಿರ್ಮಾಣಗೊಳ್ಳಲಿವೆ. ಈ ರಸ್ತೆ 200 ಅಡಿ ವಿಸ್ತೀರ್ಣ ಹೊಂದಿರುತ್ತದೆ. ಉದ್ದೇಶಿತ ಯೋಜನೆಯಲ್ಲಿ ಹತ್ತು ಪಥಗಳ ರಸ್ತೆ ನಿರ್ಮಾಣದ ಗುರಿ ಹೊಂದಲಾಗಿದೆಯಾದರೂ, ಆಯಾ ನಗರಗಳ ವಾಹನ ಸಂಚಾರ ದಟ್ಟಣೆಗೆ ಅನುಗುಣವಾಗಿ ಪಥಗಳೆಷ್ಟು ಎಂಬ ಬಗ್ಗೆ ಅಂತಿಮ ನಿರ್ಧಾರ ತಜ್ಞರ ಸಮಿತಿ ನೀಡುವ ವರದಿಯನ್ನಾದರಿತವಾಗಲಿದೆ ಎನ್ನಲಾಗಿದೆ.
ಇನ್ನೊಂದಷ್ಟು ರೈತರ ಜಮೀನು ಹಾಗೂ ನಾಗರಿಕರ ಮನೆಗಳು, ಕಟ್ಟಡಗಳು ಹೆದ್ದಾರಿ ಪಾಲಾಗಿ ಬಹಳಷ್ಟು ಮಂದಿ ಸಂತ್ರಸ್ತರಾಗಲಿದ್ದಾರೆ. ಈ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 4, 600 ಕೋಟಿ ವೆಚ್ಚವಾಗಲಿದ್ದು, ಇನ್ನು ಭೂಸ್ವಾಧೀನಕ್ಕಾಗಿಯೂ ಸುಮಾರು 2,600 ಕೋಟಿಯನ್ನು ತೆಗೆದಿರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಬಹಳಷ್ಟು ಕಡೆಗಳಲ್ಲಿ ಬೈಪಾಸ್ ರಸ್ತೆಗಳ ನಿರ್ಮಾಣವೂ ನಡೆಯಲಿದೆ ಎನ್ನಲಾಗುತ್ತಿದೆ. ಈ ಕುರಿತಂತೆ ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ಅಲ್ಲಿ ತನಕ ಕಾಯಬೇಕಾಗಿದೆ. ಭವಿಷ್ಯದ ದೃಷ್ಠಿಯಿಂದ ರಾಷ್ಟ್ರೀಯ ಹೆದ್ದಾರಿಯ ಅಗತ್ಯತೆಯಿರುವುದಂತು ನಿಜ.