ಮಂಡ್ಯ: ದುಂದು ವೆಚ್ಚ ಮಾಡಿ ತಿಥಿ ಕಾರ್ಯಗಳನ್ನು ಮಾಡುವುದರಿಂದ ಬದುಕಿದ್ದವರು ಸಾಲದ ಸುಳಿಗೆ ಸಿಲುಕಿಸಿ ಸಾಯುವಂತಾಗಿದೆ ಎಂದು ಮಾಜಿ ಶಾಸಕ ಡಾ.ಮಹೇಶ್ಚಂದ್ ಆತಂಕ ವ್ಯಕ್ತಪಡಿಸಿದರು.
ಕೆ.ಎಂ.ದೊಡ್ಡಿಯ ಅಣ್ಣೂರು ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಅಶ್ವಿನಿ (22) ಎಂಬಾಕೆಯ ಉತ್ತರ ಕ್ರಿಯಾದಿ ಭೂಶಾಂತಿ ಕಾರ್ಯದ ಅಂಗವಾಗಿ ನಡೆದ ತಿಥಿ ಬಿಡಿ, ಸಸಿ ನೆಡಿ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಇವತ್ತು ತಿಥಿ ಕಾರ್ಯಕ್ಕೂ ಲಕ್ಷಾಂತರ ರೂ. ಖರ್ಚು ಮಾಡಿ ಅದ್ದೂರಿಯಾಗಿ ಕಾರ್ಯಗಳನ್ನು ಮಾಡುವುದು, ಲೆಕ್ಕವಿಲ್ಲದಷ್ಟು ಹಣ ವ್ಯಯಿಸಿ ಮದುವೆ ಮಾಡುವುದನ್ನು ಜನರು ರೂಢಿಸಿಕೊಂಡಿದ್ದಾರೆ. ಇದರಿಂದ ಸಾಲದ ಸುಳಿಗೆ ಸಿಲುಕಿ ಹಲವಾರು ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇಂತಹ ದುಂದು ವೆಚ್ಚದ ಮದುವೆ, ಮುಂಜಿ, ತಿಥಿ ಕಾರ್ಯಗಳನ್ನು ಮಾಡಬೇಕಾದ ಸಂದರ್ಭದಲ್ಲಿ ತಮ್ಮ ಹೊಲ-ಗದ್ದೆಗಳಲ್ಲಿ ನೆಟ್ಟು ಬೆಳೆಸಿದ್ದ ಮರಗಳನ್ನು ಮಾರಿ ಕಾರ್ಯಗಳನ್ನು ಮಾಡಿದ ನಿದರ್ಶನಗಳಿವೆ ಆದ್ದರಿಂದ ಇದೆಲ್ಲವನ್ನು ಬಿಟ್ಟು ಸರಳವಾಗಿ ಕಾರ್ಯಗಳನ್ನು ಮಾಡಿ, ಕಾರ್ಯಗಳನ್ನು ಮಾಡುವ ವೇಳೆ ಸವಿ ನೆನಪಿಗಾಗಿ ಸಸಿಗಳನ್ನು ನೆಡುವುದಲ್ಲದೆ, ಬಂದ ಸಂಬಂಧಿಕರಿಗೂ ಸಸಿಗಳನ್ನು ಕೊಟ್ಟು ನೆಡುವಂತೆ ಪ್ರೇರೇಪಿಸುವಂತೆ ಕಿವಿ ಮಾತು ಹೇಳಿದರು.
ಇದೇ ವೇಳೆ ಅಶ್ವಿನಿಯ ಅಂತ್ಯಕ್ರಿಯೆ ಮಾಡಿದ್ದ ಸ್ಥಳದಲ್ಲಿ ಸಂಪಿಗೆ ಸಸಿ, ತೆಂಗಿನ ಸಸಿಗಳನ್ನು ನೆಟ್ಟು ತಿಥಿ ಕಾರ್ಯಕ್ಕೆ ಬಂದವರಿಗೆ ತೆಂಗಿನ ಸಸಿಗಳನ್ನು ನೀಡಲಾಯಿತು.
ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ರೈತ ಸಂಘದ ಮುಖಂಡರಾದ ಅಣ್ಣೂರು ಮಹೇಂದ್ರ, ಮಾದೇಗೌಡ, ಚಿಕ್ಕಮರೀಗೌಡ, ಸ್ವಾಮಿ, ಹುಚ್ಚೇಗೌಡ, ವೆಂಕಟೇಶ್, ಶಂಭು, ಮಾಲಗಾರನಹಳ್ಳಿ ಶಂಕರ್, ಸಿದ್ದೇಗೌಡ, ವಿನಯ್, ಚಿಕ್ಕಯ್ಯ ಮೊದಲಾದವರಿದ್ದರು