ಮಡಿಕೇರಿ: ಪ್ರತಿಯೊಬ್ಬ ನಾಗರಿಕನಿಗೆ ತುರ್ತು ಆರೋಗ್ಯ ಸೇವೆಗಳನ್ನು ಆತನ ಮನೆ ಬಾಗಿಲಿಗೆ ತಲುಪಿಸುವ ಚಿಂತನೆಯಡಿ ಬೆಂಗಳೂರಿನಲ್ಲಿ ಕೇಂದ್ರ ಕಛೇರಿ ಹೊಂದಿರುವ ಐರಿಲೀಫ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ‘ಐರಿಲೀಫ್’ ಎನ್ನುವ ಆ್ಯಪ್ ಮೂಲಕ ತನ್ನ ಸೇವೆಯನ್ನು ಆರಂಭಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯ ನಿರ್ವಹಣಾಧಿಕಾರಿ ರಾಘವೇಂದ್ರ ಪ್ರಸಾದ್ ಈ ಕುರಿತು ಮಾಹಿತಿ ನೀಡಿದರು. ಆಂಡ್ರಾಯ್ಡ್ ಹೊಂದಿರುವ ಸ್ಮಾರ್ಟ್ ಫೋನ್ ಗಳ ಗೂಗಲ್ ಪ್ಲೇ ಸ್ಟೋರ್ ಮೂಲಕ ‘ಐರಿಲೀಫ್’ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ತುರ್ತು ಆಂಬ್ಯೂಲೆನ್ಸ್ ಸೇವೆ, ರಕ್ತನಿಧಿ ಕೇಂದ್ರದ ಸೌಲಭ್ಯ, ಹೋಂ ಕೇರ್ ಸೌಲಭ್ಯಗಳನ್ನು ಹೊಂದಿಕೊಳ್ಳಲು ಸಂಸ್ಥೆ ನೆರವಾಗಲಿದೆಯೆಂದು ತಿಳಿಸಿದರು.
ಅಪಘಾತ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆ ಯಾವುದೇ ಕಾರಣಕ್ಕೂ ಉದ್ಭವಿಸಬಾರದು ಎನ್ನುವ ಕಾರಣಕ್ಕೆ ಐರಿಲೀಫ್ ಸಂಸ್ಥೆ ರಕ್ತ ನಿಧಿ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ಸರ್ಕಾರದ ಸಹಭಾಗಿತ್ವದೊಂದಿಗೆ ಸಾರ್ವಜನಿಕರಿಗೆ ಒದಗಿಸಲಿದೆ. ಇದರೊಂದಿಗೆ ಅಗತ್ಯವಿರುವ ವಿವಿಧ ಗುಂಪುಗಳ ರಕ್ತವನ್ನು ಯಾವ ರಕ್ತ ನಿಧಿಯಿಂದ ಪಡೆಯಬಹುದೆನ್ನುವ ಬಗ್ಗೆ ಅಗತ್ಯ ಮಾಹಿತಿಯನ್ನು ಒದಗಿಸಲಾಗುತ್ತದೆ. ಇದರೊಂದಿಗೆ ಸಂಸ್ಥೆಯ ಮುಖೇನ ರಕ್ತ ದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ರಕ್ತವನ್ನು ಸಂಗ್ರಹಿಸುವ ಉದ್ದೇಶವನ್ನೂ ಸಂಸ್ಥೆ ಹೊಂದಿರುವುದಾಗಿ ತಿಳಿಸಿದರು.
ಆಯಾ ಪ್ರದೇಶಗಳಲ್ಲಿನ ಆಂಬ್ಯೂಲೆನ್ಸ್ ಸೇವೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ನಿರ್ದಿಷ್ಟ ದರದಲ್ಲಿ ಆಂಬ್ಯೂಲೆನ್ಸ್ ಸೇವೆಯನ್ನು ಒದಗಿಸಲಾಗುತ್ತದೆಂದು ತಿಳಿಸಿದ ರಾಘವೇಂದ್ರ ಪ್ರಸಾದ್, ಐರಿಲೀಫ್ ಮೂಲಕ ಮನೆಯಿಂದಲೇ ಹಲವು ಸೇವೆಗಳನ್ನು ಹೊಂದಲು ಅವಕಾಶವನ್ನು ಕಲ್ಪಿಸಲಾಗಿದೆ. ಅದರಂತೆ ಪ್ರಯೋಗಾಲಯ ಪರೀಕ್ಷೆ, ದಾದಿಯರ ಸೇವೆಯನ್ನೂ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ. ಇವೆಲ್ಲಕ್ಕು ಕೈಗೆಟಕುವ ದರವನ್ನು ನಿಗಧಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸ್ಮಾರ್ಟ್ ಫೊನ್ ಮೂಲಕ ಐರಿಲೀಫ್ ಆ್ಯಪ್ ಬಳಸಿ ಸೌಲಭ್ಯಗಳನ್ನು ಪಡೆಯಬಹುದಲ್ಲದೆ, ಸಹಾಯವಾಣಿ ಕೇಂದ್ರದ ದೂ.7847840000ಕ್ಕೆ ಕರೆ ಮಾಡುವ ಮೂಲಕವೂ ಸೌಲಭ್ಯಗಳನ್ನು ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಳಿಗಾಗಿ ಐರಿಲೀಫ್ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಶುಜಾತ್ ಪಾಶ ಮೊ. 9632502351, ಆಪರೇಷನ್ಸ್ ಅಂಡ್ ಮಾರ್ಕೆಟಿಂಗ್ ಮ್ಯಾನೇಜರ್ ರಾಕೇಶ್ ಪಿ.ಎಂ. ಮೊ.9880929143 ಯನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ತಪೋರಾಜ್ ಹಾಗೂ ರಾಕೇಶ್ ಪಿ.ಎಂ. ಉಪಸ್ಥಿತರಿದ್ದರು.