ಮಂಡ್ಯ: ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದ ಘಟನೆ ಪಾಂಡವಪುರದಲ್ಲಿ ನಡೆದಿದೆ. ಪಾಂಡವಪುರದ ಐದು ದೀಪವೃತ್ತದಲ್ಲಿ ಜಮಾಯಿಸಿದ ರೈತಸಂಘದ ಕಾರ್ಯಕರ್ತರು ಶ್ರೀರಂಗಪಟ್ಟಣ-ಜೇವರ್ಗಿ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಕೆಲ ಹೊತ್ತು ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಮೈಸೂರು ರಾಜಮನೆತನಕ್ಕೆ ಸೇರಿದ ಬೇಬಿಬೆಟ್ಟ ಸುತ್ತಮುತ್ತಲಿನ ಅಮೃತ ಮಹಲ್ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸುವ ಮೂಲಕ ರಾಜ್ಯದ ಬೊಕ್ಕಸಕ್ಕೆ ಕನ್ನಹಾಕುತ್ತಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ಸಂಸದ ಸಿ.ಎಸ್.ಪುಟ್ಟರಾಜು ಬಾಗಿಯಾಗಿರುವುದು ಖಂಡನೀಯವಾಗಿದೆ. ಈಗಾಗಲೇ ಗಣಿ ಇಲಾಖೆಯಿಂದ ಸಂಸದ ಪುಟ್ಟರಾಜು ಮಾಲೀಕತ್ವದ ಕ್ರಷರ್ ಸೇರಿದಂತೆ ಸುಮಾರು 18 ಗಣಿ ಮಾಲೀಕರಿಗೆ ದಂಡ ಹಾಕಲಾಗಿದೆ. ಅನುಮತಿ ಪಡೆದಿರುವುದಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಅಕ್ರಮಗಾರಿಕೆ ಮಾಡುವ ಮೂಲಕ ಸರಕಾರಕ್ಕೆ ತೆರಿಗೆ ವಂಚಿಸುತ್ತಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯೂ ಕೇವಲ ಕೆಲವೇ ಕಲವು ಮಂದಿಗೆ ಮಾತ್ರ ದಂಡ ಹಾಕಿದ್ದಾರೆ ಇನ್ನೂ ಸಾಕಷ್ಟು ಮಂದಿ ಅಕ್ರಮ ಗಣಿಗಾರಿಕೆ ಭಾಗಿಯಾಗಿದ್ದು ಎಲ್ಲರಿಗೂ ದಂಡಹಾಕಿ ಪ್ರಕರಣ ದಾಖಲಿಸುವ ಜೊತೆಗೆ ಅಲ್ಲಿನ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸ್ಥಗಿತಗೊಳಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇಬಿಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಮೆಗರ್ ಬ್ಲಾಸ್ಟಿಂಗ್ ಮಾಡುವ ಮೂಲಕ ಕಲ್ಲುಸಿಡಿಸುತ್ತಿರುವುದರಿಂದ ಪಕ್ಕದಲ್ಲೇ ಇರುವಂತಹ ಕೆಆರ್ಎಸ್ ಅಣೆಕಟ್ಟೆಗೂ ಸಹ ತೊಂದರೆಯಾಗಲಿದೆ. ಆದ್ದರಿಂದ ಅಲ್ಲಿನ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವ ಮೂಲಕ ಬೇಬಿಬೆಟ್ಟವನ್ನು ರಕ್ಷಿಸಬೇಕು, ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಉನ್ನತ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ತಾ.ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ದಯಾನಂದ್, ಮಾಕೇಗೌಡ, ಜಯರಾಮು, ಕೆ.ಟಿ.ಗೋವಿಂದೇಗೌಡ, ಯೋಗೇಶ್, ವಿಜೇಂದ್ರ, ಅನಿಲ್, ಚಿಟ್ಟನಹಳ್ಳಿಮಹೇಶ್, ಶಿವಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.