ಮಡಿಕೇರಿ: ಖ್ಯಾತ ಪತ್ರಕರ್ತ ರವಿ ಬೆಳಗೆರೆ ಮತ್ತು ಅನಿಲ್ ರಾಜ್ ಅವರ ಪ್ರಕರಣ ವಿಧಾನಸಭೆಯ ‘ಹಕ್ಕು ಚ್ಯುತಿ’ಯ ಪರಿಮಿತಿಗೆ ಒಳಪಡುವುದಿಲ್ಲವೆಂದು ಮಾಜಿ ಎಂಎಲ್ಸಿ ಹಾಗೂ ಹಿರಿಯ ವಕೀಲರಾದ ಎ.ಕೆ.ಸುಬ್ಬಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ‘ಪತ್ರಿಕಾ ದಿನಾಚರಣೆ’ಯನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಜನಪ್ರತಿನಿಧಿಗಳಿಗೆ ಸಂಬಂಧಿಸಿದಂತೆ ಅವರ ವೈಯಕ್ತಿಕ ವಿಚಾರಗಳ ಕುರಿತು ಪತ್ರಿಕೆಯಲ್ಲಿ ಪ್ರಕಟವಾದ ವಿಚಾರ ವಿಧಾನಸಭೆಯ ಶಾಸಕರ ಶಾಸನ ಬದ್ಧ ಹಕ್ಕುಗಳಿಗೆ ಚ್ಯುತಿಯನ್ನು ಉಂಟು ಮಾಡಲಾರದು. ಈ ಹಿನ್ನೆಲೆಯಲ್ಲಿ ಇದು ಹಕ್ಕು ಚ್ಯುತಿಯ ವ್ಯಾಪ್ತಿಗೆ ಬರುವುದಿಲ್ಲ. ಬದಲಾಗಿ, ವೈಯಕ್ತಿಕ ವಿಚಾರಗಳಾದ್ದರಿಂದ ಪತ್ರಿಕಾ ವರದಿಗೆ ಸಂಬಂಧಿಸಿದಂತೆ ‘ಮಾನನಷ್ಟ’ ಮೊಕದ್ದಮೆಯನ್ನು ಹಾಕಬಹುದಷ್ಟೆ.
ಈ ಪ್ರಕರಣದಲ್ಲಿ ಇಬ್ಬರು ಪತ್ರಕರ್ತರಿಗೆ ಒಂದು ವರ್ಷ ಶಿಕ್ಷೆಯನ್ನು ನೀಡುವುದಕ್ಕೂ ಮುನ್ನ ಶಿಕ್ಷೆಗೆ ಒಳಪಡುವ ವ್ಯಕ್ತಿಯ ಅನಿಸಿಕೆ ಅಭಿಪ್ರಾಯಗಳ ಮಂಡನೆ ಮತ್ತು ಸಮರ್ಥನೆಗೆ ಅವಕಾಶವನ್ನು ನ್ಯಾಯ ಬದ್ಧವಾಗಿ ಒದಗಿಸಬೆೇಕಾಗುತ್ತದೆ. ಆದರೆ, ಅಂತಹ ಅವಕಾಶವನ್ನು ನೀಡಿಲ್ಲವೆಂದು ಆರೋಪಿಸಿದರು.
ವಿಧಾನಸಭೆಯ ಒಳಗೆ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದಲ್ಲಿ ಅದನ್ನು ಪರಿಶೀಲಿಸುವ ಹಕ್ಕನ್ನು ನ್ಯಾಯಾಲಯ ಹೊಂದಿರುತ್ತದೆ ಎಂದು ಸ್ಪಷ್ಟಪಡಿಸಿದ ಎ.ಕೆ. ಸುಬ್ಬಯ್ಯ, ಇದೀಗ ರಾಜ್ಯ ಉಚ್ಚ ನ್ಯಾಯಾಲಯ ಇಬ್ಬರು ಪತ್ರಕರ್ತರ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಸದನದ ಅಧ್ಯಕ್ಷರ ನಿಲುವಿಗೆ ವಿರುದ್ಧವಾಗಿ ತೀರ್ಪು ನೀಡಿದಲ್ಲಿ ವಿಧಾನಸಭೆಯ ಗೌರವಕ್ಕೆ ಧಕ್ಕೆ ಬರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ವಿಧಾನ ಸಭೆಯ ಶಾಸಕರು, ಲೋಕಸಭೆಯಲ್ಲಿನ ಸಂಸದರು ತಮ್ಮ ಕರ್ತವ್ಯವನ್ನು ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗದ ರೀತಿಯ ಪತ್ರಿಕಾ ವರದಿಗಳು ‘ಹಕ್ಕು ಚ್ಯುತಿ’ಯ ವ್ಯಾಪ್ತಿಗೆ ಒಳಪಡುತ್ತದೆ ಮತ್ತು ಇಂತಹ ಸಂದರ್ಭಗಳಲ್ಲಿ ಶಿಕ್ಷೆ ವಿಧಿಸುವ ಅಧಿಕಾರವನ್ನು ಹೊಂದಿರುವುದಾಗಿ ಸುಬ್ಬಯ್ಯ ಸ್ಪಷ್ಟಪಡಿಸಿದರು.
ವಿಧಾನಸಭೆಗೆ ನೀಡಲಾಗಿರುವ ಹಕ್ಕುಗಳು ಎಂದಿಗೂ ಇತರರ ವಿರುದ್ಧ ಸೇಡು ತೀರಿಸಿಕೊಳ್ಳಲು ಬಳಕೆಯಾಗಬಾರದೆಂದು ತಿಳಿಸಿದರು.
ಫೋಟೋ :: ಸುಬ್ಬಯ್ಯ