ಗುಂಡ್ಲಪೇಟೆ: ಸುಪ್ರೀಂಕೋರ್ಟ್ ಆದೇಶದಂತೆ ಹೆದ್ದಾರಿಯಲ್ಲಿದ್ದ ಬಾರ್ ಅನ್ನು ಕಾಲೇಜು ಸಮೀಪದ ಜಮೀನಿಗೆ ಸ್ಥಳಾಂತರಿಸಿರುವ ವಿರುದ್ಧ ತಾಲೂಕಿನ ತೆರಕಣಾಂಬಿ ಗ್ರಾಮಸ್ಥರು ಪ್ರತಿರೋಧ ವ್ಯಕ್ತಪಡಿಸಿದರು.
ಗ್ರಾಮದಲ್ಲಿನ ಬಾರನ್ನು ಗ್ರಾಮದ ಪ್ರಭಾವಿ ವ್ಯಕ್ತಿಯೊಬ್ಬರ ಜಮೀನಿನಲ್ಲಿ ಸ್ಥಾಪಿಸಲಾಗಿದ್ದು, ಇದಕ್ಕೆ ಅಬಕಾರಿ ಇಲಾಖೆಯು ಅನುಮತಿಯನ್ನು ನೀಡಿದೆ. ಈ ಸ್ಥಳದ ಸಮೀಪದಲ್ಲಿ ಪರಿಶಿಷ್ಟ ವರ್ಗದ ಜನರ ಬಡಾವಣೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಪೊಲೀಸ್ ವಸತಿಗೃಹ, ಕಾನ್ವೆಂಟ್, ಹಿಂದುಳಿದ ವರ್ಗಗಳ ಮೊರಾರ್ಜಿ ವಸತಿ ಶಾಲೆಗಳಿವೆ. ಇಷ್ಟಿದ್ದರೂ ಕೂಡ ಅಬಕಾರಿ ಇಲಾಖೆಯು ಹಾಗೂ ಸ್ಥಳೀಯ ಗ್ರಾಮಪಂಚಾಯಿತಿಗಳು ಬಾರ್ ಪ್ರಾರಂಭಿಸಲು ಒಳಗೊಳಗೆ ಅನುಮತಿ ನೀಡಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗ್ಗೆ ಬಾರ್ ನಾಮಫಲಕ ಅಳವಡಿಸಿ ವ್ಯವಹಾರ ಪ್ರಾರಂಭಿಸುತ್ತಿದ್ದಂತೆಯೇ ರೊಚ್ಚಿಗೆದ್ದ ಮಹಿಳೆಯರು ಹಾಗೂ ಗ್ರಾಮಸ್ಥರು ಬಾರ್ ಕಾರ್ಯಾರಂಭಿಸದಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಆದರೆ ಇದಕ್ಕೊಪ್ಪದ ಬಾರ್ ಮಾಲೀಕರು ತಾವು ಸಂಬಂಧಪಟ್ಟವರಿಂದ ಅನುಮತಿ ಪಡೆದುಕೊಂಡಿದ್ದು ತಾವು ವ್ಯವಹಾರ ನಡೆಸುವುದಾಗಿ ಹೇಳಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು. ಇಲ್ಲಿ ಬಾರ್ ಎದುರು ಬಡಾವಣೆಯ ನಿವಾಸಿಗಳು ನೀರು ಹಿಡಿಯುವ ತೊಂಬೆಯಿದ್ದು ಮಹಿಳೆಯರು ಹಾಗೂ ಮಕ್ಕಳು ಕುಡುಕರ ಹಾವಳಿಯಿಂದ ತೊಂದರೆಗೊಳಗಾಗಲಿದ್ದಾರೆ. ಅಲ್ಲದೆ ಶಾಲೆಕಾಲೇಜುಗಳಿಗೆ ಹೋಗುವ ಮಕ್ಕಳ ಮೇಲೆ ತೀವ್ರ ದುಷ್ಪರಿಣಾಮಬೀರಲಿದೆ. ಆದ್ದರಿಂದ ಗ್ರಾಮ ಮಿತಿಯಲ್ಲಿ ಬಾರ್ ಸ್ಥಾಪನೆ ಬೇಡ ಎಂದು ಒತ್ತಾಯಿಸಿದರು.
ಸಹಾಯಕ ಸಬ್ ಇನ್ಸ್ಪೆಕ್ಟರ್ ಶಿವಣ್ಣ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ನೀಡುವಂತೆ ಪ್ರತಿಭಟನಾಕಾರರ ಮನವೊಲಿಸಿದರು. ಇನ್ನುಮುಂದೆ ಬಾರ್ ಕಾರ್ಯಾರಂಭ ಮಾಡಿದರೆ ಮಹಿಳೆಯರು ಹಾಗೂ ಮಕ್ಕಳು ಬಾರ್ ಎದುರು ಕುಳಿತು ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿ ಪ್ರತಿಭಟನಾಕಾರರು ತೆರಳಿದರು.
ಪ್ರತಿಭಟನಾ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ನಾರಾಯಣನಾಯ್ಕ, ಟಿ.ಎಸ್.ಮಹದೇವಸ್ವಾಮಿ, ಮಾಜಿ ಅಧ್ಯಕ್ಷೆ ಮಹದೇವಮ್ಮ, ಮುಖಂಡರಾದ ಆನಂದ, ಟಿ.ಆರ್.ಪ್ರಕಾಶ್, ಬಸವನಾಯ್ಕ, ಗೋಪಾಲನಾಯ್ಕ, ಸಿದ್ದು, ರಘು, ರವಿ, ನಾಗೇಶ್, ಕುಮಾರ್, ಕಮಲಮ್ಮ, ಸುವರ್ಣ, ಶಾಂತಿ, ಭಾರತಿ, ರಾಜಮ್ಮ, ಶಿವನಾಯ್ಕ ಸೇರಿದಂತೆ ಸುಮಾರು 250ಕ್ಕೂ ಹೆಚ್ಚಿನ ಜನರಿದ್ದರು.