ಚಾಮರಾಜನಗರ: ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ತಮಿಳುನಾಡು ಮತ್ತು ಕೇರಳ ಎರಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸವಾರರು ವೇಗವಾಗಿ ಚಾಲನೆ ಮಾಡುತ್ತಿರುವುದರಿಂದ ಅವಘಡಗಳು ಸಂಭವಿಸುತ್ತಿದ್ದು, ಅದಕ್ಕೆ ಬ್ರೇಕ್ ಹಾಕಲು ಗುಂಡ್ಲುಪೇಟೆ ಪೊಲೀಸರು ಮುಂದಾಗಿದ್ದಾರೆ.
ಈಗಾಗಲೇ ಹೆದ್ದಾರಿಗಳಲ್ಲಿ ಅಪಘಾತ ವಲಯಗಳನ್ನು ಗುರುತಿಸಿ ಬ್ಯಾರಿಕೇಡ್ ಅಳವಡಿಸುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ. ಕೇರಳ ಹಾಗೂ ತಮಿಳುನಾಡಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳಾದ 766 ಹಾಗೂ 67ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ಅದರಲ್ಲೂ ಇತ್ತೀಚೆಗೆ ಈ ಹೆದ್ದಾರಿಗಳನ್ನು ಅಭಿವೃದ್ಧಿಗೊಳಿಸಿದ ಪರಿಣಾಮವಾಗಿ ಈ ಮಾರ್ಗಗಳಲ್ಲಿ ವಾಹನಗಳು ಅತಿವೇಗದಿಂದ ಸಂಚರಿಸುತ್ತಿವೆ.
ರಾತ್ರಿ 9ಗಂಟೆಗೆ ಎರಡೂ ಮಾರ್ಗಗಳಲ್ಲಿ ಚೆಕ್ ಪೋಸ್ಟ್ ಗಳು ಬಂದ್ ಆಗುವುದರಿಂದ ಅಷ್ಟರೊಳಗೆ ಚೆಕ್ ಪೋಸ್ಟ್ ಗಳನ್ನು ದಾಟಿಬಿಡುವ ಸಲುವಾಗಿ ಅತಿ ವೇಗದಲ್ಲಿ ವಾಹನವನ್ನು ಚಾಲನೆ ಮಾಡಿಕೊಂಡು ಹೋಗುವುದು ಸಾಮಾನ್ಯವಾಗಿದೆ. ಇದು ಅಪಘಾತಕ್ಕೆ ಕಾರಣವಾಗುತ್ತಿದೆ. ಹೆದ್ದಾರಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಶಾಲೆಗಳಿದ್ದು, ಶಾಲಾ ಬಿಡುವ ಸಮಯದಲ್ಲಿ ಅತಿವೇಗದಿಂದ ವಾಹನಗಳು ಸಾಗುವುದರಿಂದ ವಿದ್ಯಾರ್ಥಿಗಳಿಗೆ ರಸ್ತೆ ದಾಟಲು ತೊಂದರೆಯಾಗುತ್ತಿದೆ. ಇನ್ನು ಪಾದಚಾರಿ ಮಾರ್ಗಗಳನ್ನು ಬೀದಿಬದಿ ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದು ಪಾದಚಾರಿಗಳು ಕೂಡ ರಸ್ತೆಯಲ್ಲಿಯೇ ಸಾಗಬೇಕಾಗಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ.
ಇಂತಹ ಘಟನೆಗಳನ್ನು ನಿಯಂತ್ರಿಸುವ ಸಲುವಾಗಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಪಟ್ಟಣಕ್ಕೆ ಪ್ರವೇಶಿಸುವ ಕೇರಳ ರಸ್ತೆಯ ಬಸವಭವನ, ಬಂಡೀಪುರ ಮಾರ್ಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ಹಾಗೂ ಬೆಂಗಳೂರು ಮಾರ್ಗದ ಕೆಪಿಟಿ ಹೋಟೆಲ್ ಬಳಿ ಬ್ಯಾರಿಕೇಡ್ಗಳನ್ನು ಅಳವಡಿಸಿ ಪಟ್ಟಣದ ಮಿತಿಯಲ್ಲಿ ವೇಗ ನಿಯಂತ್ರಣ ಮಾಡಲು ಕ್ರಮ ಕೈಗೊಂಡಿದ್ದು, ಆ ಮೂಲಕ ಸುರಕ್ಷತೆ ಕಾಪಾಡುವಲ್ಲಿ ಪೊಲೀಸರು ಮುಂದಾಗಿದ್ದಾರೆ.