News Kannada
Sunday, September 25 2022

ಕರ್ನಾಟಕ

ಕಾಸರಗೋಡಿನ ಚಾಲ ಕ್ಯಾಂಪಸ್ ಅಧ್ಯಯನ ಕೇಂದ್ರ ಹೆಸರಿಗೆ ಮಾತ್ರ! - 1 min read

Photo Credit :

ಕಾಸರಗೋಡಿನ ಚಾಲ ಕ್ಯಾಂಪಸ್ ಅಧ್ಯಯನ ಕೇಂದ್ರ ಹೆಸರಿಗೆ ಮಾತ್ರ!

ಕಾಸರಗೋಡು: ಕಣ್ಣೂರು ವಿಶ್ವವಿದ್ಯಾನಿಲಯದ ಕಾಸರಗೋಡು ಚಾಲ ಕ್ಯಾಂಪಸ್‍ನ ಅಧ್ಯಯನ ಕೇಂದ್ರದ ಮೂರು ಕೋರ್ಸ್‍ಗಳಲ್ಲಿ ಎರಡು ಕೋರ್ಸ್‍ಗಳನ್ನು ವಿಶ್ವವಿದ್ಯಾನಿಲಯ ಕೊನೆಗೊಳಿಸಿದೆ. ಮೂರನೇ ಕೋರ್ಸ್‍ನಲ್ಲಿ ವಿದ್ಯಾರ್ಥಿಗಳಿದ್ದಾರೆ. ಆದರೆ ಕೋರ್ಸ್ ನಿರ್ದೇಶಕರ ಸಹಿತ ಎಂಟು ಅಧ್ಯಾಪಕರು ಗುತ್ತಿಗೆಯಾಧಾರದಲ್ಲಿ ನೌಕರಿ ನಿರ್ವಹಿಸುತ್ತಿದ್ದಾರೆ. ಬಹುಕಾಲದ ವಿದ್ಯಾರ್ಥಿಗಳ ಪ್ರತಿಭಟನೆ, ಹೋರಾಟದ ಬಳಿಕ ತೆರೆದು ಕಾರ್ಯಾರಂಭಗೊಂಡ ಇಲ್ಲಿನ ವಸತಿಗೃಹದಲ್ಲಿ ವಾಸವಿರುವವರಲ್ಲಿ ಹೆಚ್ಚು ಮಂದಿ ಕೇಂದ್ರ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾಗಿದ್ದಾರೆ.

2005ರಲ್ಲಿ ಶಿಲಾನ್ಯಾಸಗೈದು ಮೂರು ವರ್ಷಗಳಲ್ಲಿ ಪೂರ್ತಿಯಾದ ಅಧ್ಯಯನ ಕೇಂದ್ರದಲ್ಲಿ ಎಂಬಿಎ ಹಾಗೂ ಮಾಹಿತಿ ತಂತ್ರಜ್ಞಾನ ವಿದ್ಯಾಕೇಂದ್ರ ನಡೆಸುತ್ತಿದ್ದ ಎಂಸಿಎ ಕೋರ್ಸ್ ಕಣ್ಮುಚ್ಚಿದೆ. ವಿದ್ಯಾರ್ಥಿಗಳು ಇಲ್ಲದಿರುವುದರಿಂದ ಕೋರ್ಸ್ ನಿಲ್ಲಿಸಿರುವುದಾಗಿ ವಿಶ್ವವಿದ್ಯಾನಿಲಯ ಹೇಳಿದರೆ ಖಾಯಂ ಅಧ್ಯಾಪಕರಿಲ್ಲದೆ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ರಕ್ಷಕರು, ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಎಂಸಿಎಯ ಅಂತಿಮ ಸೆಮಿಸ್ಟರ್‍ ನ ಕೊನೆಯ ಪರೀಕ್ಷೆಗಾಗಿ ಕಳೆದ ವಾರ ಇಲ್ಲಿನ ವಿದ್ಯಾರ್ಥಿಗಳು ಮಾಙಟುಪರಂಬಿನ ಕಣ್ಣೂರು ವಿವಿಗೆ ತೆರಳಿದ್ದರು. ಆದರೆ ಪರೀಕ್ಷೆ ನಡೆಯಲಿಲ್ಲ. ಅಧ್ಯಾಪಕರು ಸಹಿ ಹಾಕದ ರೆಕಾರ್ಡ್‍ನೊಂದಿಗೆ ವಿದ್ಯಾರ್ಥಿಗಳು ತೆರಳಿರುವುದರಿಂದ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಮಾಹಿತಿ ತಿಳಿದು ವಿವಿ ನೀಲೇಶ್ವರ ಕ್ಯಾಂಪಸ್‍ನ ಅಧ್ಯಾಪಕರೊಡನೆ ಸಹಿ ಹಾಕಲು ನಿರ್ದೇಶಿಸಿತ್ತು. ವಿದ್ಯಾರ್ಥಿಗಳ ಸಂಕಷ್ಟ ಮನಗಂಡು ನೀಲೇಶ್ವರ ಕ್ಯಾಂಪಸ್‍ನ ಅಧ್ಯಾಪಕರು ಹಿಂದೆಂದೂ ನೋಡದ ರೆಕಾರ್ಡ್‍ಗೆ ಸಹಿ ಹಾಕಿ ನೀಡಿದರು. ಮರುದಿನ ಪರೀಕ್ಷೆ ನಡೆಯಿತು.

ಎಂಬಿಎಯ ಕೊನೆಯ ಬ್ಯಾಚ್ 2014ರಲ್ಲಾಗಿತ್ತು. 2015 ಮತ್ತು 2016ರಲ್ಲಿ ಕಣ್ಣೂರು ವಿವಿ ಎಂಬಿಎಗೆ ಅರ್ಜಿ ಆಹ್ವಾನಿಸಿತ್ತು. ಆದರೆ ವಿದ್ಯಾರ್ಥಿಗಳಿರಲಿಲ್ಲ. ಎರಡು ಬಾರಿ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಲಾಗಿತ್ತು. ಬೆರಳೆಣಿಕೆಯಷ್ಟು ಅರ್ಜಿಗಳು ಮಾತ್ರವೇ ಲಭಿಸಿದ್ದುವು. 30000ರೂ. ವಾರ್ಷಿಕ ಶುಲ್ಕ ನೀಡಿ ಅಧ್ಯಾಪಕರಿಲ್ಲದ ಸ್ಥಳಕ್ಕೆ ಕಲಿಯಲು ಯಾರೂ ಮುಂದೆ ಬರಲಿಲ್ಲ.

ಎಂಬಿಎಗೆ 45 ಸೀಟುಗಳಿದ್ದವು. ಆರಂಭದಲ್ಲಿ ಸಾಕಷ್ಟು ಅರ್ಜಿದಾರರಿದ್ದರು. ಬಳಿಕ ಅರ್ಜಿಗಳ ಸಂಖ್ಯೆ ಕಡಿಮೆಯಾಯಿತು. ಎಂಸಿಎಗೆ ಕೊನೆಯದಾಗಿ ಪ್ರವೇಶಾತಿ ನೀಡಿರುವುದು 2014ರಲ್ಲಾಗಿದೆ. ಆ ಬಳಿಕದ ವರ್ಷ ಸ್ವಲ್ಪ ಅರ್ಜಿಗಳು ಲಭಿಸಿದ್ದವು. ಈ ಅರ್ಜಿದಾರರನ್ನು ಇಟ್ಟುಕೊಂಡು ಕೋರ್ಸ್ ನಡೆಸುವುದು ನಷ್ಟವಾಗಲಿದೆ ಎಂಬ ಕಾರಣದಿಂದ ಕೋರ್ಸ್ ಆರಂಭಗೊಂಡಿಲ್ಲ. ಆ ಬಳಿಕದ ಎರಡು ವರ್ಷಗಳಲ್ಲಿ ಅರ್ಜಿಗಳು ಲಭಿಸಿಲ್ಲ. ಇದರಿಂದ ಈ ಕೋರ್ಸ್ ಕಣ್ಮುಚ್ಚಿತು.

ಸಮಸ್ಯೆಗಳ ಮಹಾಪೂರ: ಮೂರು ಎಕರೆ ಸ್ಥಳದಲ್ಲಿ ಚಾಲ ಕ್ಯಾಂಪಸ್ ಕಾರ್ಯಾಚರಿಸುತ್ತಿದೆ. 21,600 ಚದರಡಿ ವಿಸ್ತೀರ್ಣದಲ್ಲಿರುವ ಮೂರು ಅಂತಸ್ತಿನ ಕಟ್ಟಡ ತಲೆ ಎತ್ತಿ ನಿಂತಿದೆ. ಆದರೆ ಕಟ್ಟಡದಲ್ಲಿ ಈಗ ಇರುವುದು ಕೇವಲ ಒಂದು ಕೋರ್ಸ್ ಅದು ಬಿ.ಎಡ್ ಮಾತ್ರ. ಕನ್ನಡ ಬಿ. ಎಡ್ ಸಹಿತ ಹಿಸ್ಟರಿ, ಅರಬಿಕ್ ಇತ್ಯಾದಿ ಬಿ. ಎಡ್ ಕೋರ್ಸ್‍ಗಳಲ್ಲಾಗಿ 100 ವಿದ್ಯಾರ್ಥಿಗಳು ಇಲ್ಲಿದ್ದಾರೆ. ಎಂಸಿಎ, ಎಂಬಿಎ ಕೋರ್ಸ್‍ಗಳಿರುವಾಗ ಮುನ್ನೂರರಷ್ಟಿದ್ದ ವಿದ್ಯಾರ್ಥಿಗಳು ಈಗ ಇಲ್ಲ. ಪರಿಣಾಮ ಈ ವಿಶಾಲ ಕಟ್ಟಡವನ್ನು ಈಗ ಉಪಯೋಗಿಸುವುದು ಬಿ.ಎಡ್. ವಿದ್ಯಾರ್ಥಿಗಳು ಮಾತ್ರ. ಎರಡು ವರ್ಷಗಳಿಂದ ಮುಚ್ಚುಗಡೆಗೊಂಡ ಕೊಠಡಿಗಳು ಹಾಗೆಯೇ ಇವೆ.

See also  ಗುಂಡಿ ಬಿದ್ದ ರಸ್ತೆಯಿಂದ ಮೊಪೈಡ್ ಸವಾರನ ಪ್ರಾಣ ಹೋಯ್ತು!

9490 ಚದರಡಿ ವಿಸ್ತೀರ್ಣದಲ್ಲಿರುವ ಹಾಸ್ಟೆಲ್ ಕಾಮಗಾರಿ ಪೂರ್ತಿಯಾಗಿ ವರ್ಷಗಳ ಕಾಲ ಮೂಲೆಗುಂಪಾಗಿತ್ತು. 40 ಮಂದಿಯ ವಾಸಕ್ಕೆ ಹಾಸ್ಟೆಲ್‍ನಲ್ಲಿ ಸೌಕರ್ಯವಿದೆ. ಕೊನೆಗೂ ಕಳೆದ ವರ್ಷ ಹಾಸ್ಟೆಲ್ ಕಾರ್ಯಾರಂಭಗೊಂಡಿತ್ತು. ಆದರೆ ಹಾಸ್ಟೆಲ್‍ಗೆ ಲಭಿಸಿದ ಅರ್ಜಿಗಳು ಹನ್ನೆರಡು ಮಾತ್ರ.

ಕೇಂದ್ರ ವಿಶ್ವವಿದ್ಯಾನಿಲಯದಲ್ಲಿ ಹಾಸ್ಟೆಲ್ ಇಲ್ಲದ ಸಮಸ್ಯೆ ಎದುರಾದಾಗ ಇಲ್ಲಿನ ಹಾಸ್ಟೆಲ್‍ನ್ನು ಕೇಂದ್ರ ವಿವಿಯ ವಿದ್ಯಾರ್ಥಿಗಳಿಗೆ ನೀಡಲು ತೀರ್ಮಾನಿಸಲಾಗಿತ್ತು. ಸಂಸದ ಪಿ. ಕರುಣಾಕರನ್ ಮೊದಲಾದವರ ಶಿಫಾರಸಿನ ಮೇರೆಗೆ ಈ ತೀರ್ಮಾನ ಕೈಗೊಂಡಿರುವುದಾಗಿ ಹೇಳಲಾಗುತ್ತಿದೆ. ಎರಡು ವಿಶ್ವವಿದ್ಯಾನಿಲಯಗಳು ಈ ಒಪ್ಪಂದಕ್ಕೆ ಸಹಿ ಹಾಕಿದ್ದವು.

ಎರಡು ಲಕ್ಷ ರೂ. ಕೋಶನ್ ಡೆಪಾಸಿಟ್ ಪಡೆದುದರ ಹೊರತು ಒಬ್ಬ ವಿದ್ಯಾರ್ಥಿಯಿಂದ 750ರೂ. ಬಾಡಿಗೆ ಸ್ವೀಕರಿಸಲಾಗುತ್ತಿದೆ. ಚಾಲದ ವಿದ್ಯಾರ್ಥಿಗಳಿಂದ 450ರೂ. ಬಾಡಿಗೆ ಸ್ವೀಕರಿಸಲಾಗುತ್ತಿದೆ.
ಚಾಲ ಕ್ಯಾಂಪಸ್ ಹಾಗೂ ಪರಿಸರ ತೀರಾ ನಿರ್ಜೀವವಾಗಿದೆ. ಕಾಲೇಜಿನ ನೋಟವೇ ಇಲ್ಲದ ಸಂಸ್ಥೆ ಇದಾಗಿದೆ. ಜನರ ಓಡಾಟವಿಲ್ಲದ ಪರಿಸರ. ವಿದ್ಯಾನಗರದಿಂದ ಎರಡು ಕಿಲೋಮೀಟರ್ ದೂರ ನಡೆದುಕೊಂಡು ಹೋದರೆ ಚಾಲ ಕ್ಯಾಂಪಸ್ ಸಿಗುತ್ತದೆ. ಹೆಸರಿಗೆ ಗೂಡಂಗಡಿಯಾದರೂ ಪರಿಸರದಲ್ಲಿಲ್ಲ. ಬೆಳಿಗ್ಗೆ 10 ಗಂಟೆಗೆ ಬರುವ ಕೆಎಸ್‍ಆರ್‍ ಟಿಸಿ ಬಸ್ಸು ಇಲ್ಲಿಗಿರುವ ಏಕೈಕ ಬಸ್ಸು ಸೌಕರ್ಯ. ಸಂಜೆ ವಿದ್ಯಾರ್ಥಿಗಳು ಎರಡು ಕಿ.ಮೀ. ನಡೆದುಕೊಂಡೇ ಹೋಗಬೇಕು. ಬೆಳಗ್ಗಿನ ಕೆಎಸ್‍ಆರ್‍ ಟಿಸಿಗೆ ಕಾದು ಇಲ್ಲವಾದರೆ ಬಾಡಿಗೆ ವಾಹನ ಮಾಡಿ ತೆರಳಬೇಕು. ಚಾಲ ಕ್ಯಾಂಪಸ್‍ಗೂ ಸ್ವಂತ ವಾಹನವಿಲ್ಲ.

ಆದರೆ ಕ್ಯಾಂಪಸ್‍ನ ಹಾಸ್ಟೆಲ್‍ನಲ್ಲಿ ವಾಸವಿರುವ ಕೇಂದ್ರವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳು ಕೇಂದ್ರ ವಿಶ್ವವಿದ್ಯಾನಿಲಯದ ಸ್ವಂತ ಬಸ್ಸಿನಲ್ಲಿ ಹಾಸ್ಟೆಲ್‍ಗೆ ಬಂದು ಹೋಗುತ್ತಾರೆ.
ಖಾಯಂ ಅಧ್ಯಾಪಕರಿಲ್ಲದಿರುವುದು ಚಾಲ ಶೈಕ್ಷಣಿಕ ಸಂಸ್ಥೆಯ ಮೂಲಭೂತ ಸಮಸ್ಯೆಯಾಗಿದೆ. ಆದುದರಿಂದ ಸರಕಾರದ ಅನುಮತಿಯೂ ಲಭಿಸುತ್ತಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು