ಮಡಿಕೇರಿ: ಕಾವೇರಿ ನದಿ ಕಲುಷಿತಗೊಳ್ಳುವುದನ್ನು ತಡೆಯಲು ಮತ್ತು ನದಿಯ ಪಾವಿತ್ರ್ಯತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಭರವಸೆ ನೀಡಿದ್ದಾರೆ.
ಕಾವೇರಿ ನದಿ ಸ್ವಚ್ಛತಾ ಆಂದೋಲನದ ಪ್ರಮುಖರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಜೀವನದಿ ಕಲುಷಿತಗೊಳ್ಳುವುದನ್ನು ತಪ್ಪಿಸಲು ಶಾಶ್ವತ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಶ್ರೀವಿದ್ಯಾ, ಕಾವೇರಿ ನದಿ ಕಲುಷಿತಗೊಳ್ಳುತ್ತಿರುವ ಬಗ್ಗೆ ಸಮಗ್ರ ಅಧ್ಯಯನಕ್ಕಾಗಿ ಭಾರತೀಯ ವಿಜ್ಞಾನ ಸಂಸ್ಥೆಯೊಂದಿಗೆ ಸರಕಾರ ಒಪ್ಪಂದ ಮಾಡಿಕೊಂಡಿದ್ದು ಸೂಕ್ತ ಕ್ರಮಕ್ಕಾಗಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಮೂಲ ಕಾವೇರಿ ಸ್ಥಾನದಲ್ಲಿ ಪ್ರವಾಸಿಗರಿಂದ ಹಲವು ರೀತಿಯಲ್ಲಿ ನದಿ ತಟಗಳು ಸಂಪೂರ್ಣ ಕಲುಷಿತಗೊಳ್ಳುವುದರೊಂದಿಗೆ ನದಿಗೆ ನೇರವಾಗಿ ತ್ಯಾಜ್ಯಗಳು ಸೇರುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಬಗ್ಗೆ ಸ್ಥಳೀಯ ಆಡಳಿತಗಳಿಗೆ ಕ್ರಮಕೈಗೊಳ್ಳುವಂತೆ ಆದೇಶ ನೀಡಲಾಗಿದೆ. ಯಾವುದೇ ಸ್ಥಳಗಳಲ್ಲಿ ನದಿಗೆ ನೇರವಾಗಿ ಕಲುಷಿತ ತ್ಯಾಜ್ಯಗಳು ಸೇರದಂತೆ ಎಚ್ಚರವಹಿಸಲು ಸೂಚಿಸಲಾಗಿದೆ ಎಂದರು.
ಶಬರಿಮಲೆಯ ಪಂಪಾ ವ್ಯಾಪ್ತಿಯಲ್ಲಿ ಭಕ್ತಾದಿಗಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಬಹುತೇಕ ಯಶಸ್ಸು ಕಂಡಿದೆ. ಇದೇ ರೀತಿ ತಲಕಾವೇರಿ, ಭಾಗಮಂಡಲ ಮುಂತಾದ ಕ್ಷೇತ್ರಗಳಲ್ಲಿ ಪ್ರವಾಸಿಗರಿಗೆ ಸ್ವಚ್ಛತೆ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ಸ್ಥಳೀಯ ಆಡಳಿತಗಳ ಮೂಲಕ ಸೂಚನಾ ಫಲಕಗಳನ್ನು ಅಳವಡಿಸಲು ಸಲಹೆ ನೀಡಲಾಗುವುದು. ಸ್ವಚ್ಛತೆ ನಿಟ್ಟಿನಲ್ಲಿ ಸ್ಥಳೀಯರು ಕೂಡ ಆಡಳಿತ ವ್ಯವಸ್ಥೆಯೊಂದಿಗೆ ಕೈ ಜೋಡಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
ಸದ್ಯದಲ್ಲಿಯೇ ಸಿಎಸ್ಆರ್ ಸಭೆ ಕರೆಯಲಾಗುವುದು. ಕಾವೇರಿ ನದಿ ಬಗ್ಗೆ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲು ಸ್ಥಳೀಯರು ಮುಂದೆ ಬರಬೇಕು ಎಂದಿರುವ ಜಿಲ್ಲಾಧಿಕಾರಿಗಳು ಸ್ವಚ್ಛ ಕೊಡಗು ಹಾಗೂ ಸ್ವಚ್ಛ ಕಾವೇರಿ ನಿರ್ಮಾಣಕ್ಕಾಗಿ ಎಲ್ಲಾ ರೀತಿಯ ಕಾರ್ಯಯೋಜನೆಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಭಾಗಮಂಡಲದಲ್ಲಿ ಕಂಡು ಬಂದ ಅಶುಚಿತ್ವದ ಬಗ್ಗೆ ತಕ್ಷಣ ಕ್ರಮಕ್ಕೆ ಸೂಚಿಸಲಾಗಿದೆ. ಪ್ರವಾಸಿಗರಿಗೆ ಅಡುಗೆ ಮಾಡಲು ದಾಸೋಹ ಭವನ ನಿರ್ಮಿಸಲು ಚಿಂತನೆ ಹರಿಸಲಾಗಿದೆ. ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಭವನದಲ್ಲಿ ಪ್ರವಾಸಿಗರಿಗೆ ಅಡುಗೆ ಮಾಡಲು ಅವಕಾಶ ಕಲ್ಪಿಸಲಾಗುವುದು. ತ್ಯಾಜ್ಯಗಳ ವಿಲೇವಾರಿಗೆ ಕ್ರಮಕೈಗೊಳ್ಳಲಾಗುವುದು. ನಿರ್ದಿಷ್ಟ ಸ್ಥಳ ಹೊರತಾಗಿ ಬೇರೆಡೆ ರಸ್ತೆ ಬದಿ ಅಥವಾ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರವಾಸಿಗರು ಅಡುಗೆ ಮಾಡುವ ಚಟುವಟಿಕೆಗಳು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.