News Kannada
Wednesday, November 30 2022

ಕರ್ನಾಟಕ

ಜಿಲ್ಲೆಗೆ ರಾಹುಲ್ ಗಾಂಧಿ ಬಂದರೂ ಬಂದ್ ಗೆ ಕರೆ ಕೊಡ್ತೀವಿ: ಬಿಎಸ್ ವೈ - 1 min read

Photo Credit :

ಜಿಲ್ಲೆಗೆ ರಾಹುಲ್ ಗಾಂಧಿ ಬಂದರೂ ಬಂದ್ ಗೆ ಕರೆ ಕೊಡ್ತೀವಿ: ಬಿಎಸ್ ವೈ

ಮಡಿಕೇರಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಜ.25 ರಂದು ಮೈಸೂರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಫೆ.4 ರಂದು ಬೆಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಕರ್ನಾಟಕ ಬಂದ್ ಗೆ ಕುಮ್ಮಕ್ಕು ನೀಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ. ಇನ್ನು ಮುಂದೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭೇಟಿ ನೀಡುವ ಜಿಲ್ಲೆಗಳಲ್ಲಿ ಬಿಜೆಪಿ ಬಂದ್ ಗೆ ಕರೆ ನೀಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಗರದ ಗಾಂಧಿ ಮೈದಾನದಲ್ಲಿ ನಡೆದ ಬಿಜೆಪಿ ‘ಪರಿವರ್ತನಾ ಯಾತ್ರೆ’ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಜ.25 ರಂದು ಕರ್ನಾಟಕ ಬಂದ್ ನ್ನು ಕಾಂಗ್ರೆಸ್ ಸರ್ಕಾರ ಪರೋಕ್ಷವಾಗಿ ವಿವಿಧ ಸಂಘಟನೆಗಳ ಮೂಲಕ ನಡೆಸಲು ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪರಿವರ್ತನಾ ಯಾತ್ರೆಯ ಸಮಾರೋಪಕ್ಕೆ ಫೆ.4 ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಂತದಲ್ಲೂ ಬಂದ್ ನಡೆಸುವ ಕುತಂತ್ರವನ್ನು ಕಾಂಗ್ರೆಸ್ ನಡೆಸುತ್ತಿದೆ. ಹಾಗೇನಾದರು ಕಾಂಗ್ರೆಸ್ ನಡೆದುಕೊಂಡಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದ ಯಾವುದೇ ಜಿಲ್ಲೆಗೆ ಭೇಟಿ ನೀಡಿದರೂ ಅಲ್ಲಿ ಬಿಜೆಪಿ ಬಂದ್ ಮತ್ತು ಪ್ರತಿಭಟನೆ ನಡೆಸಲಿದೆ ಎಂದರು.

ಮೈಸೂರಿನಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಅನಗತ್ಯ ಕಿರುಕುಳ ನೀಡುವ ಉದ್ದೇಶದಿಂದ ಪರೋಕ್ಷವಾಗಿ ಬಂದ್ ಕರೆಯನ್ನು ನೀಡುವ ಕಾರ್ಯವನ್ನು ಕಾಂಗ್ರೆಸ್ ವಿವಿಧ ಸಂಘಸಂಸ್ಥೆಗಳ ಮೂಲಕ ಮಾಡಿದೆ. ಆದರೆ, ಮೈಸೂರಿನ ಪರಿವರ್ತನಾ ಯಾತ್ರೆ ಲಕ್ಷಾಂತರ ಕಾರ್ಯಕರ್ತರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಯಡಿಯೂರಪ್ಪ ತಿಳಿಸಿದರು.

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಜೆಟ್ ಮಂಡನೆಗೆ ಯಾವುದೇ ಅವಕಾಶವಿಲ್ಲ. ಬೇಕಾಬಿಟ್ಟಿಯಾಗಿ ಬಜೆಟ್ ಮಂಡನೆಗೆ ಸಿದ್ದರಾಮಯ್ಯ ಮುಂದಾದಲ್ಲಿ ಅದಕ್ಕೆ ಕಾನೂನಿನಲ್ಲಿಯೂ ಅವಕಾಶವಿಲ್ಲವೆಂದು ಹೇಳಿದರು. ತಾರಾತುರಿಯ ಕಾಮಗಾರಿಗಳ ಮೂಲಕ ಹಳೆಕಲ್ಲಿಗೆ ಹೊಸಬಿಲ್ಲು ತೋರಿಸಲು ಸರಕಾರ ಮುಂದಾಗಿದೆ ಎಂದು ಯಡಿಯೂರಪ್ಪ ಆರೋಪಿಸಿದರು.

ಕಾಂಗ್ರೆಸ್ ಸರಕಾರ ಲೂಟಿಯಲ್ಲಿ ತೊಡಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಇತಿಮಿತಿಗಳಿಲ್ಲದೆ ರಾಜ್ಯವನ್ನು ಲೂಟಿ ಮಾಡುತ್ತಿದ್ದು, ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ, ಮರಳು ನೀತಿ ಮತ್ತು ಅಧಿಕಾರಿಗಳ ವರ್ಗಾವಣೆಯ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯವೇ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಮುಖ್ಯಮಂತ್ರಿಗಳು ತಮ್ಮ ವಿರುದ್ಧದ 67 ಪ್ರಕರಣಗಳನ್ನು ಸಿಐಡಿಯನ್ನು ಬಳಸಿ ಮುಚ್ಚಿ ಹಾಕುತ್ತಿದ್ದಾರೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಈ ಎಲ್ಲ ಪ್ರಕರಣಗಳ ಮರು ತನಿಖೆಗೆ ಕ್ರಮ ವಹಿಸುವುದಾಗಿ ತಿಳಿಸಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಳೆದ ಬಾರಿ 1.85 ಲಕ್ಷ ಕೋಟಿಯ ಬಜೆಟ್ ಮಂಡಿಸಿದ್ದರೆ, 2.40 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇಷ್ಟು ದೊಡ್ಡ ಮೊತ್ತದ ಸಾಲವನ್ನು ಆಡಳಿತದ ಕ್ಷಿಪ್ರ ಅವಧಿಯಲ್ಲಿ ನಡೆಸಿರುವ ಧೀಮಂತ ಮುಖ್ಯಮಂತ್ರಿಯೆಂದು ಲೇವಡಿಯಾಡಿದರು.

See also  ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣ: ಡಿಸಿ, ಎಸ್‍ಪಿ ಭೇಟಿ

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಅವರು, 32 ಸಾವಿರ ಕೋಟಿ ಬಜೆಟ್ ಮಂಡನೆ ಮಾಡಿ, ಮೂರು ವರ್ಷಗಳ ತಮ್ಮ ಅವಧಿಯಲ್ಲಿ 1.18 ಲಕ್ಷ ಕೋಟಿ ಸಂಪನ್ಮೂಲ ಕ್ರೊಢೀಕರಣ ಮಾಡಿದ್ದರು ಮತ್ತು ಆ ಅವಧಿಯಲ್ಲಿ ಕೊಡಗಿಗೆ 1800 ಕೋಟಿಯಷ್ಟು ಅನುದಾನವನ್ನು ಒದಗಿಸಿದ್ದರು. ಸಿದ್ದರಾಮಯ್ಯ ಸರ್ಕಾರ ಕೊಡಗಿಗೆ ನೀಡಿರುವ ಅನುದಾನಗಳ ಬಗ್ಗೆ ಶ್ವೇತ ಪತ್ರವನ್ನು ಹೊರಡಿಸಲೆಂದು ಆಗ್ರಹಿಸಿದರು.

ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಎಂಎಲ್ಸಿ ಸುನಿಲ್ ಸುಬ್ರಮಣಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೀನಾ ಪ್ರಕಾಶ್, ರಾಜ್ಯ ಕಾರ್ಯದರ್ಶಿ ತೇಜಸ್ವಿನಿ ರಮೇಶ್ ಮಾತನಾಡಿದರು.

ವೇದಿಕೆಯಲ್ಲಿ ಪಕ್ಷದ ರಾಜ್ಯ ಪ್ರ.ಕಾ. ರವಿ ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ, ಭಾರತೀಶ್, ಜಿಪಂ ಅಧ್ಯಕ್ಷ ಬಿ.ಎ. ಹರೀಶ್, ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ, ಮಾಜಿ ಎಂಎಲ್ಸಿ ಎಸ್.ಜಿ. ಮೇದಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್, ಉದಯ ಕುಮಾರ್ ಶೆಟ್ಟಿ, ರವಿ ಕುಶಾಲಪ್ಪ, ರಾಬಿನ್ ದೇವಯ್ಯ, ರವಿ ಕಾಳಪ್ಪ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಬಿಜೆಪಿ ಕಾರ್ಯಕರ್ತರು ನಗರದ ಮುಖ್ಯ ಬೀದಿಗಳಲ್ಲಿ ಬೃಹತ್ ಮೆರವಣಿಗೆ ನಡೆಸಿದರು.

ಕಾಂಗ್ರೆಸ್ ಸರಕಾರ ತೊಲಗಿದರೆ ಕರ್ನಾಟಕಕ್ಕೆ ಉಳಿಗಾಲ: ಭಾರತೀಯ ಜನತಾ ಪಕ್ಷದ ಈಗಿನ ಹೋರಾಟ ಕೇವಲ ‘ಕುರ್ಚಿ’ಗಾಗಿ ನಡೆಯುತ್ತಿರುವ ಹೋರಾಟವಲ್ಲ. ಬದಲಾಗಿ, ನಮ್ಮ ಆಚಾರ, ವಿಚಾರ ಮತ್ತು ಭಾರತೀಯತೆಯ ಉಳಿವಿಗಾಗಿ ನಡೆಸುತ್ತಿರುವ ಪ್ರಯತ್ನವಾಗಿದ್ದು, ಮುಂದಿನ ಚುನಾವಣೆಯಲ್ಲಿ ಮುಖವಾಡ ಹೊತ್ತ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಕರೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು