News Kannada
Friday, December 02 2022

ಕರ್ನಾಟಕ

ಅಖಿಲ ಭಾರತ ಜಾನಪದ ಕಲಾ ಪರಿಷತ್ತಿನ ಸಾರಥ್ಯದಲ್ಲಿ ಲೋಕಕಲಾ ಮಹೋತ್ಸವ

Photo Credit :

ಅಖಿಲ ಭಾರತ ಜಾನಪದ ಕಲಾ ಪರಿಷತ್ತಿನ ಸಾರಥ್ಯದಲ್ಲಿ ಲೋಕಕಲಾ ಮಹೋತ್ಸವ

ಕಾಸರಗೋಡು: ಅಖಿಲ ಭಾರತ ಜಾನಪದ ಮತ್ತು ಬುಡಕಟ್ಟು ಕಲಾ ಪರಿಷತ್ತಿನ ನೇತೃತ್ವದಲ್ಲಿ 2018ರ ಮೊದಲಾರ್ಧದಲ್ಲಿ ದಕ್ಷಿಣ ಭಾರತೀಯ ಮಟ್ಟದ ಅಖಿಲ ಭಾರತ ಲೋಕಕಲಾ ಮಹೋತ್ಸವ ನಡೆಯಲಿದ್ದು, ಇದರ ಪ್ರಥಮ ಕಾರ್ಯಕ್ರಮ ಕಾಸರಗೋಡಿನ ಎಡನೀರು ಶ್ರೀಮಠದಲ್ಲಿ ಫೆ. 17ರಂದು ನಡೆಯುವ ಮೂಲಕ ಲೋಕಕಲಾ ಮಹೋತ್ಸವ’ಕ್ಕೆ ನಾಂದಿಯಾಗಲಿದೆ.

ಭಾರತದ ಅಸ್ಮಿತೆಯ ಪ್ರತೀಕವಾದ ಪ್ರತಿ ರಾಜ್ಯಗಳ ಪ್ರಾದೇಶಿಕ ಜಾನಪದ ಮತ್ತು ಬುಡಕಟ್ಟು ಕಲಾ-ಸಂಸ್ಕೃತಿಗಳನ್ನು ಉದ್ದೀಪಿಸಿ- ಜಾಗೃತಗೊಳಿಸಿ ಅದಕ್ಕೆ ಪುನರುತ್ತಾನ ನೀಡುತ್ತಾ ತನ್ಮೂಲಕ ಭಾರತದ ವಿವಿಧತೆಯನ್ನು ಏಕತೆಯ ಏಕಸೂತ್ರದೊಳಗೆ ನೇಯುವುದು ಲೋಕಕಲಾ ಮಹೋತ್ಸವದ ಪ್ರಮುಖ ಉದ್ದೇಶವಾಗಿದೆ.

ಫೆ. 17ರಂದು ಎಡನೀರು ಶ್ರೀಮಠದ ಸಹಕಾರದೊಂದಿಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ- ತೆಲಂಗಾಣ, ಪಾಂಡಿಚೇರಿ ಮತ್ತು ಕರ್ನಾಟಕದ ವೈವಿಧ್ಯ ಜಾನಪದ ಕಲಾಪ್ರಕಾರದ ಪ್ರದರ್ಶನ, ಪ್ರಾತ್ಯಕ್ಷಿಕೆ ಸಹಿತ ಕಲಾ ಸಂವಾದಗಳು ನಡೆಯಲಿದ್ದು, ಸುಮಾರು 200ಕ್ಕೂ ಅಧಿಕ ಕಲಾವಿದರು ಒಂದೇ ವೇದಿಕೆಯಲ್ಲಿ ಪಾಲ್ಗೊಳ್ಳುವರು. 17ರಂದು ಎಡನೀರು ಶ್ರೀಮಠದ ವಿಶೇಷ ಸಭಾಂಗಣದಲ್ಲಿ, ಶ್ರೀ ಎಡನೀರು ಕೇಶವಾನಂದ ಭಾರತೀ ಶ್ರೀಪಾದಂಗಳವರಿಂದ ಉದ್ಘಾಟಿಸಲ್ಪಟ್ಟು ನಾಂದಿಯಾಗುವ ಸಮಾರಂಭ, ಎರಡನೇ ದಿನ ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರು ಸಮೀಪ ಸಮಾರೋಪಗೊಳ್ಳಲಿದೆ. ದೇಶದ ಪ್ರಸಿದ್ಧ ಜಾನಪದ ಕಲಾ ತಜ್ಞರು, ಖ್ಯಾತ ಕಲಾವಿದರು, ಚಿಂತಕರು ಸಹಿತ ರಾಷ್ಟ್ರೀಯ ಮಟ್ಟದ ಪ್ರಸಿದ್ಧರು ಪಾಲ್ಗೊಳ್ಳಲಿರುವರು. ರಾಷ್ಟ್ರೀಯ ಮಟ್ಟದ ಜಾನಪದ-ಬುಡಕಟ್ಟು ಕಲಾ ಸಂಸ್ಕೃತಿಯ ಅತ್ಯಪರೂಪದ ಈ ಉತ್ಸವ ಕಾಸರಗೋಡಿನಲ್ಲಿ ನಡೆಯುವುದು ಮತ್ತು ದಕ್ಷಿಣ ಭಾರತದ 6 ರಾಜ್ಯಗಳಲ್ಲಿ ನಡೆಯುವ ಉತ್ಸವಕ್ಕೆ ಕಾಸರಗೋಡಿನ ನೆಲ ಉದ್ಘಾಟನಾ ವೇದಿಕೆಯಾಗುವುದು ಇದೇ ಮೊದಲ ಬಾರಿಯಾಗಿದೆ. ಎಡನೀರಿನಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ತುಳುವೆರೆ ಆಯನೊ ಕೂಟೋ ಬದಿಯಡ್ಕ ಮತ್ತು ಬೊಳಿಕೆ ಜಾನಪದ ಕಲಾತಂಡ ಸಹಕಾರ ನೀಡಲಿವೆ.

ಅಖಿಲ ಭಾರತ ಲೋಕಕಲಾ ಮಹೋತ್ಸವ ಸರಣಿ ಕಾರ್ಯಕ್ರಮವಾಗಿದ್ದು, ಮಾಚ್ 3-4ರಂದು ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ವ್ರಾವಕಂಡ ಎಂಬಲ್ಲಿ ಎರಡನೇ ಕಾರ್ಯಕ್ರಮ ಮತ್ತು ಮಾರ್ಚ್ 9-10ರಂದು ತೆಲಂಗಾನದ ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ್ ಎಂಬಲ್ಲಿ ಮೂರನೇ ಕಾರ್ಯಕ್ರಮ ಜರಗಲಿದೆ. 4ನೇ ಕಾರ್ಯಕ್ರಮ ಮಾರ್ಚ್ 11ರಂದು ಕರ್ನಾಟಕದ ಬೀದರ್, 5ನೇ ಕಾರ್ಯಕ್ರಮ 17-18ರಂದು ತಮಿಳುನಾಡು, 6ನೇ ಕಾರ್ಯಕ್ರಮ 20-21ರಂದು ಪಾಂಡಿಚೇರಿ ಯೂನಿವರ್ಸಿಟಿಯಲ್ಲಿ ನಡೆಯಲಿದೆ.

ಯಾವುದೇ ಒಂದು ನಾಡಿನ ಸಾಂಸ್ಕೃತಿಕ ಚರಿತ್ರೆ ಅಡಗಿರುವುದು ಅಲ್ಲಿನ ಜನಪದ-ಬುಡಕಟ್ಟು ಸಂಸ್ಕೃತಿಯ ಕಲೆ ಮತ್ತು ಪ್ರದರ್ಶನಗಳಲ್ಲಿ ಎಂಬುದು ನಿರ್ವಿವಾದಿತ ವಿಚಾರ. ಆದರೆ ಕೇರಳಕ್ಕೆ ಸೇರ್ಪಡೆಗೊಂಡ ಕಾಸರಗೋಡಿನಲ್ಲಿ ಹತ್ತು-ಹಲವು ಭಾಷೆಗಳ ಮೂಲಕ ಜನಪದ-ಬುಡಕಟ್ಟು ಆಚಾರ ಆನುಷ್ಠಾನ ಸಹಿತ ಸಂಸ್ಕೃತಿಗಳು ಅಸ್ತಿತ್ವ ಕಾಪಾಡಲು ಹೆಣಗಾಡುತ್ತಿವೆ. ದೇಶದಲ್ಲಿ ಜನಪದ ಸಂಸ್ಕೃತಿ ಪೋಷಿಸಲು ಕೇಂದ್ರ ಸರಕಾರ ಕೋಟ್ಯಂತರ ರೂ ವ್ಯಯಿಸುತ್ತಿದೆಯಾದರೂ ಅದು ತಳ ಮಟ್ಟಕ್ಕೆ ತಲುಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಕಲಾ ಪ್ರೋತ್ಸಾಹ ಅನುದಾನ, ಕಲಾವಿದರಿಗೆ ರಾಷ್ಟ್ರೀಯ ಸರಾಸರಿಯ ಪಿಂಚಣಿ, ಪ್ರತಿ ಕಲಾಮಂಡಳಿಗಳಿಗೆ ಉದ್ಯೋಗ ಖಾತರಿ ಮಾದರಿಯಲ್ಲಿ ಕಲಾ ಪ್ರದರ್ಶನಗಳಿಗೆ ಅವಕಾಶ, ಕಲೆಯ ಅಭ್ಯುದಯ ಮತ್ತು ಹಿತ ಸಂರಕ್ಷಣೆಗಾಗಿ ವೈವಿಧ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ, ಕಲಾವಿದರ ಹಿತರಕ್ಷಣೆಗಳೇ ಮೊದಲಾದುದು ಪರಿಷತ್ತಿನ ಉದ್ದೇಶವಾಗಿದೆ. ಪಾರಂಪರಿಕ ಕಲೆ ಮತ್ತು ಕಲಾವಲಂಬಿ ಜನತೆಯನ್ನು ಕಲೆಯ ಪುನರುತ್ತೇಜನಕ್ಕಾಗಿ ಪ್ರೋತ್ಸಾಹಿಸಿ, ದೇಶದ ಜನಪದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೈದಾಟಿಸುವುದು ಮತ್ತು ಜಾನಪದ-ಬುಡಕಟ್ಟು ಕಲಾ ಸಂಸ್ಕೃತಿಗಳನ್ನು ದಾಖಲಿಸಿ, ಇತಿಹಾಸಕ್ಕೆ ಚ್ಯುತಿ ಬಾರದಂತೆ ಕಾಪಾಡುತ್ತಲೇ ಅದಕ್ಕೆ ಪ್ರೋತ್ಸಾಹ ನೀಡುವುದು ಪರಿಷತ್ತಿನ ಉದ್ದೇಶವಾಗಿದೆ.

See also  ಕಾಂಗ್ರೆಸ್ ಮುಖಂಡನಿಂದ ವೈದ್ಯನ ಮೇಲೆ ಹಲ್ಲೆ

ಪ್ರಸ್ತುತ ಸಮಾರಂಭದೊಂದಿಗೆ ಅಖಿಲ ಭಾರತ ಮಟ್ಟದ ಜಾನಪದ ಮತ್ತು ಬುಡಕಟ್ಟು ಕಲಾ ಪರಿಷತ್ತಿನ ಕಾಸರಗೋಡು ಘಟಕ ಅಸ್ತಿತ್ವಕ್ಕೆ ಬರಲಿದೆ. ಈ ಮೂಲಕ ಈ ನೆಲದ ಜಾನಪದ ಕಲಾ ಕಾರ್ಯಕರ್ತರನ್ನು, ಕಲಾವಿದರನ್ನು ಸಂಯೋಜಿಸಿ-ಸಂಘಟಿಸುವ ಕೆಲಸ ನಡೆಯಲಿದೆ. ಕಲೆ ಮತ್ತು ಕಲಾವಿದರ ಅಭ್ಯುದಯ ದೃಷ್ಟಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಪರಿಷತ್ತಿನ ಉದ್ಘಾಟನಾ ಸಮಾರಂಬದಲ್ಲಿ ಕಾಸರಗೋಡು ಜಿಲ್ಲೆಯ ಜಾನಪದ ಮತ್ತು ಬುಡಕಟ್ಟು ಸಹಿತ ಎಲ್ಲಾ ಕಲಾಕ್ಷೇತ್ರದ ಕಾರ್ಯಕರ್ತರು ಮತ್ತು ಪ್ರತಿನಿಧಿಗಳು ಪಾಲ್ಗೊಳ್ಳಬೇಕೆಂದು ಅಪೇಕ್ಷಿಸುತ್ತೇವೆ.

ಈ ಕುರಿತು ವಿವರಿಸಲು ಕಾಸರಗೋಡು ಪ್ರೆಸ್ ಕ್ಲಬ್ಬಿನಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಅಖಿಲ ಭಾರತೀಯ ಜಾನಪದ ಮತ್ತು ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಜೋಗಿಲಾಲ್ ಸಿದ್ಧರಾಜು, ಕೇರಳ ವಿಭಾಗದ ಸಂಚಾಲಕ-ಸಂಯೋಜಕರಾದ ಅನಿಲ್ ಕುಮಾರ್, ಡಾ. ರಾಜೇಶ್ ಆಳ್ವ ಬದಿಯಡ್ಕ, ಪತ್ರಕರ್ತ- ಕಲಾಚಿಂತಕ ಎಂ.ನಾ. ಚಂಬಲ್ತಿಮಾರ್, ಹರ್ಷ ರೈ ಪುತ್ರಕಳ, ಉತ್ಸವ ಸಮಿತಿ ಗೌರವಾಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು ಮಠ, ಸೂರ್ಯ ಮಾಸ್ತರ್ ಎಡನೀರು, ವಸಂತ ಅಜಕ್ಕೋಡು ಸಹಿತ ಪ್ರಮುಖರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು