ಸೋಮವಾರಪೇಟೆ: ವಿವಾಹ ವಿಚ್ಚೇದನ ಪಡೆದಿದ್ದ ಮಹಿಳೆಯೋರ್ವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಚಿಕ್ಕಾರ ಗ್ರಾಮದಲ್ಲಿ ನಡೆದಿದೆ.
ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಾರ ಗ್ರಾಮದ ತಮ್ಮಯ್ಯ ಅವರ ಪುತ್ರಿ ಸೌಮ್ಯ(32) ಎಂಬವರು ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂರು ವರ್ಷಗಳ ಹಿಂದೆ ವಿವಾಹ ವಿಚ್ಚೇದನ ಪಡೆದು ಮೈಸೂರಿನಲ್ಲಿ ನೆಲೆಸಿದ್ದ ಸೌಮ್ಯ ಅವರು ಕಳೆದ 3 ದಿನಗಳ ಹಿಂದಷ್ಟೇ ಚಿಕ್ಕಾರ ಗ್ರಾಮದ ಮನೆಗೆ ಆಗಮಿಸಿದ್ದರು. ಇಂದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕೋವಿಯಿಂದ ಎದೆಯ ಭಾಗಕ್ಕೆ ಗುಂಡು ಹೊಡೆದುಕೊಂಡಿದ್ದಾರೆ.
ಘಟನೆ ನಡೆದ ಕೆಲ ನಿಮಿಷದಲ್ಲೇ ಸಹೋದರ ಶರತ್ ಮನೆಗೆ ಆಗಮಿಸಿದ್ದು, ತಕ್ಷಣ ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಿಷಯ ತಿಳಿಸಿದ್ದಾರೆ. ವೈದ್ಯಾಧಿಕಾರಿ ಇಂದೂಧರ್ ಅವರು ಸ್ಥಳಕ್ಕಾಗಮಿಸಿ ಗಾಯಾಳುವನ್ನು ಸೋಮವಾರಪೇಟೆ ಆಸ್ಪತ್ರೆಗೆ ಸಾಗಿಸುವಂತೆ ಸಲಹೆ ನೀಡಿದ್ದಾರೆ.
ಸೋಮವಾರಪೇಟೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸೌಮ್ಯ ಸಾವನ್ನಪ್ಪಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.