ಚಾಮರಾಜನರ: ಎಂಟ್ರೋ ಟ್ಯಾಕ್ಸೀನಿಯಾ(ಇಟಿ) ಎಂಬ ಕಾಯಿಲೆ ತಗುಲಿ ಸುಮಾರು 40ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಬಂಡಿಗೆರೆ ಗ್ರಾಮದಲ್ಲಿ ನಡೆದಿದೆ.
ಸಾವನ್ನಪ್ಪಿರುವ ಕುರಿಗಳು ಗ್ರಾಮದ ಬ್ಯಾಡಮೂಡ್ಲು ರಸ್ತೆಯಲ್ಲಿರುವ ದುಂಡಶೆಟ್ಟಿ ಎಂಬುವವರಿಗೆ ಸೇರಿದ್ದಾಗಿವೆ. ಇನ್ನು ಇದಲ್ಲದೆ ಗ್ರಾಮದ ಕೆಲವೆಡೆಗಳಲ್ಲಿ ಕುರಿಗಳು ಸಾವನ್ನಪ್ಪುತ್ತಿರುವ ಸುದ್ದಿಗಳು ಕೇಳಿ ಬರುತ್ತಿದ್ದು, ಕುರಿ ಸಾಕಿರುವ ಮಾಲೀಕರು ಆತಂಕಗೊಂಡಿದ್ದಾರೆ.
ದುಂಡಶೆಟ್ಟಿರವರು ಹಲವಾರು ವರ್ಷಗಳಿಂದಲೂ ಕುರಿ, ದನ ಹಾಗೂ ಎಮ್ಮೆಗಳನ್ನು ಸಾಕುತ್ತಿದ್ದು ಇವರ ಬಳಿಯಿದ್ದ 70 ಕುರಿಗಳಲ್ಲಿ ಶನಿವಾರ 30 ಹಾಗೂ ಭಾನುವಾರ 10ಕ್ಕೂ ಹೆಚ್ಚು ಕುರಿಗಳು ಸತ್ತಿರುವುದರಿಂದ ತೀವ್ರ ಆತಂಕಕ್ಕೊಳಗಾಗಿದ್ದಾರೆ. ವಿಷಯ ತಿಳಿದು ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡಿ ಬಂದಿದ್ದರೂ ಕೂಡ ಮತ್ತೆ 10 ಕುರಿಗಳು ಸತ್ತಿವೆ ಎನ್ನಲಾಗಿದೆ.
ಮೇಲಿಂದ ಮೇಲೆ ಕುರಿಗಳು ಸಾವನ್ನಪ್ಪುತ್ತಿರುವ ವಿಚಾರ ತಿಳಿದು ಭಾನುವಾರ ತಾಲೂಕು ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಮಳೆಗಾಲದಲ್ಲೇ ಈ ರೋಗ ಹೆಚ್ಚಾಗಿ ಬರುವುದರಿಂದ ಸರ್ಕಾರದಿಂದಲೂ ತಾಲೂಕಿನಾದ್ಯಂತ ವ್ಯಾಕ್ಸಿನ್ ಚಿಕಿತ್ಸೆ ನೀಡಲಾಗುತ್ತಿದೆ. ಕೂಡಲೇ ಕುರಿಗಳನ್ನು ಕಳೆದುಕೊಂಡು ಸಂತ್ರಸ್ತರಾಗಿರುವ ದುಂಡಶೆಟ್ಟಿ ಅವರ ಉಳಿದ ಆಡು ಕುರಿಗಳಿಗೆ ಚಿಕಿತ್ಸೆ ನೀಡಲಾಗುವುದೆಂದು ಪಶು ವೈದ್ಯಾಧಿಕಾರಿ ಪ್ರಕಾಶ್ ತಿಳಿಸಿದ್ದಾರೆ.