ಮಾಗಡಿ: ಶಾಲೆಯನ್ನು ಬಿಟ್ಟಿದ್ದ ಮಗುವಿನ ಖರ್ಚನ್ನು ತಾವೇ ಭರಿಸಿ ಮತ್ತೆ ಶಾಲೆಗೆ ಸೇರುವಂತೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಮಾಗಡಿ ಬಿಇಓ ಕಚೇರಿಯ ಅಧೀಕ್ಷಕಿ ಚಂದ್ರಿಕಾ ಮಾನವೀಯತೆ ಮೆರೆದವರಾಗಿದ್ದಾರೆ. ಚಂದ್ರಿಕಾ ಅವರು ಪ್ರತಿ ದಿನವೂ ಬೆಂಗಳೂರಿನಿಂದ ಮಾಗಡಿಗೆ ಬಸ್ ನಲ್ಲಿ ಬರುತ್ತಿದ್ದು, ಅದೇ ಬಸ್ ನಲ್ಲಿ ಬೆಂಗಳೂರಿನ ತಾವರೆಕೆರೆ ಬಳಿಯ ಗ್ರಾಮವೊಂದರಲ್ಲಿ ವಾಸವಾಗಿದ್ದ ದಂಪತಿಗಳು ತಮ್ಮ ಮಗುವಿನೊಂದಿಗೆ ಮಾಗಡಿಗೆ ಬಂದು ಕಟ್ಟಡ ನಿರ್ಮಿಸುವ ಗುತ್ತಿಗೆದಾರನ ಬಳಿ ಕೂಲಿ ಕೆಲಸ ಮಾಡುತ್ತಿದ್ದರು.
ಇದನ್ನು ಗಮನಿಸಿದ ಚಂದ್ರಿಕಾರವರು ಶಾಲೆ ಬಿಟ್ಟಿದ್ದ ಶಿವಮ್ಮ ಎಂಬ ಹೆಣ್ಣು ಮಗುವನ್ನು ಪ್ರಶ್ನೆ ಮಾಡಿದಾಗ ಕುರುಬರಹಳ್ಳಿಯಲ್ಲಿ 5ನೇ ತರಗತಿವರೆಗೂ ವ್ಯಾಸಂಗ ಮಾಡಿದ್ದು, ಮುಂದೆ ಓದಲು ಸಾಧ್ಯವಾಗದೆ ಪೋಷಕರ ಜೊತೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದೇನೆಂದು ಹೇಳಿದ್ದಾಳೆ. ಇದರಿಂದ ಎಚ್ಚೆತ್ತುಕೊಂಡ ಶಿವಮ್ಮರವರ ಪೋಷಕರ ಜೊತೆ ಚರ್ಚೆ ನಡೆಸಿ ಮಗಳ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ನಾನೇ ಭರಿಸುತ್ತೇನೆ ಓದಲು ಒಪ್ಪಿಸಿ ಎಂದು ಮಾಗಡಿ ಪಟ್ಟಣದ ಸರ್ಕಾರಿ ಶಾಲೆಗೆ ದಾಖಲಿಸಿದ್ದು ಜೊತೆಗೆ ಸರ್ಕಾರಿ ಬಾಲಕಿಯರ ವಿದ್ಯಾರ್ಥಿನಿ ನಿಲಯಕ್ಕೂ ಸೇರಿಸಲಾಗಿದೆ.
ಬಿಇಒ ಕಚೇರಿ ಅಧೀಕ್ಷಕಿ ಚಂದ್ರಿಕಾ ಮಾತನಾಡಿ, ಆರ್ಥಿಕವಾಗಿ ದುರ್ಬಲರಾಗಿದ್ದಾರೆಂದು ಅರ್ಧಕ್ಕೆ ಶಿಕ್ಷಣವನ್ನು ನಿಲ್ಲಿಸಿದ್ದು, ಈಗ ಮಗಳನ್ನು ಮತ್ತೆ ಶಾಲೆಗೆ ಸೇರಿಸಲಾಗಿದೆ. ಶಾಲೆಯ ಖರ್ಚು ವೆಚ್ಚವನ್ನು ನಾನೇ ಭರಿಸಲಿದ್ದು ಪೋಷಕರಿಗೆ ಹೊರೆಯಾಗದಂತೆ ಮಗಳ ಹಾರೈಕೆಯನ್ನು ಮಾಡುತ್ತೇನೆ, ಈಗ ಶಿವಮ್ಮ ನನಗೆ ದತ್ತು ಮಗಳ ರೀತಿ ಎಂದು ತಿಳಿಸಿದ್ದಾರೆ.