ಚಿಕ್ಕಮಗಳೂರು: ಕಳೆದ ಒಂದುವಾರದಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆ ತತ್ತರಿಸಿದ್ದು, ಇಂದೂ ಮಳೆ ಮುಂದುವರೆದ ಹಿನ್ನೆಲೆ ಮೂರು ತಾಲ್ಲೂಕು ಸೇರಿದಂತೆ ಹಲವೆಡೆ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಭಾರೀ ಮಳೆ: ಶೃಂಗೇರಿ, ಕೊಪ್ಪ, ಕಳಸ, ಕುದುರೆಮುಖ, ಮೂಡಿಗೆರೆ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದ ನಿವಾಸಿಗಳು ಆತಂಕದಲ್ಲಿ ಬದುಕುವ ಸ್ಥಿತಿ ಉಂಟಾಗಿದೆ.
ಕೆಲವೆಡೆ ಶಾಲಾ-ಕಾಲೇಜಿಗೆ ರಜೆ: ಜಿಲ್ಲೆಯ ಶೃಂಗೇರಿ, ಕೊಪ್ಪ ಹಾಗೂ ಮೂಡಿಗೆರೆ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ಆದೇಶಿಸಿದ್ದಾರೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ನದಿ ಪಾತ್ರದ ಶಾಲೆಗಳಿಗೆ ಮಾತ್ರ ರಜೆ ಸಾರಲಾಗಿದೆ.