News Kannada
Sunday, December 04 2022

ಕರ್ನಾಟಕ

ಕೊಡಗಿನಲ್ಲಿ ಮುಂದುವರಿದ ಭಾರೀ ಮಳೆ: ಶಾಲೆಗೆ ರಜೆ

Photo Credit :

ಕೊಡಗಿನಲ್ಲಿ ಮುಂದುವರಿದ  ಭಾರೀ ಮಳೆ: ಶಾಲೆಗೆ ರಜೆ

ಮಡಿಕೇರಿ: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಹಾಮಳೆ, ಬಿರುಗಾಳಿಯಿಂದ ಉಂಟಾದ ಹಾನಿ ಬಗ್ಗೆ ನಿಖರ ಲೆಕ್ಕವಿಡಲೂ ಅಸಾಧ್ಯವಾದ ಪರಿಸ್ಥಿತಿಗಳ ನಡುವೆ, ವಾಯು, ವರುಣನ ಆರ್ಭಟ ಸೋಮವಾರ ಮಧ್ಯಾಹ್ನ ಕೊಂಚ ಕಡಿಮೆಯಾಗಿತ್ತು. ಆದರೆ ಇಂದು ಮತ್ತೇ ಮಳೆ ಬಿರುಸುಗೊಂಡಿದೆ. 

ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಯ ತೀವ್ರತೆ ಗಣನೀಯ ಪ್ರಮಾಣದಲ್ಲಿ ಇಳಿದಿದ್ದರೆ, ಅದರ ಸ್ಥಾನವನ್ನು ಬಿರುಸಿನ ಗಾಳಿ ಆವರಿಸಿಕೊಂಡಿದೆ. ಅದರಲ್ಲೂ ಸಮುದ್ರ ಮಟ್ಟದಿಂದ ಮೂರು ಸಾವಿರ ಅಡಿಗಳಿಗೂ ಹೆಚ್ಚಿನ ಎಚ್ಚರದಲ್ಲಿರುವ ಮಂಜಿನ ನಗರಿ ಮಡಿಕೇರಿಯಲ್ಲಿ ಬಿರುಸಿನಿಂದ ಬೀಸುತ್ತಿರುವ ಶೀತಗಾಳಿ ಸಂಕಷ್ಟವನ್ನು ಸೃಷ್ಟಿಸಿದೆ.

ನಗರದ ನೂತನ ಖಾಸಗಿ ಬಸ್ ನಿಲ್ದಾಣದ ಬಳಿಯ ಕಟ್ಟಡವೊಂದರ ತಗಡಿನ ಮೇಲ್ಛಾವಣಿ ಗಾಳಿಯ ರಭಸಕ್ಕೆ ಸಂಪೂರ್ಣವಾಗಿ ಮುಖ್ಯ ರಸ್ತೆಗೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ದುರ್ಘಟನೆಯಿಂದ ಕೆಲವು ಗಂಟೆಗಳ ಕಾಲ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಕ್ರೇನ್ ಬಳಸಿ ಮೇಲ್ಛಾವಣಿಯನ್ನು ಪಕ್ಕಕ್ಕೆ ಸರಿಸಲಾಯಿತು.

ಮಡಿಕೇರಿಯಿಂದ ಭಾಗಮಂಡಲಕ್ಕೆ ತೆರಳುವ ಅಪ್ಪಂಗಳದಲ್ಲಿ ಸೋಮವಾರ ಮಧ್ಯಾಹ್ನ ಮುಖ್ಯ ರಸ್ತೆಗೆ ಅಡ್ಡಲಾಗಿ ಭಾರೀ ಗಾತ್ರದ ಮರವೊಂದು ಉರುಳಿ ಬಿದ್ದು ವಾಹನ ಸಂಚಾರ ಸ್ಥಗಿತಗೊಂಡು, ಪರ್ಯಾಯ ಮಾರ್ಗಕ್ಕಾಗಿ ವಾಹನಗಳು ತೆರಳುವಂತಾಯಿತು.

ಕಾವೇರಿಯ ಕ್ಷೇತ್ರ ಭಾಗಮಂಡಲ, ತಲಕಾವೇರಿಯಲ್ಲಿ ಮಳೆಯ ಪ್ರಮಾಣ ಇಳಿಮುಖಗೊಂಡು, ಪ್ರವಾಹದ ಮಟ್ಟವೂ ಕಡಿಮೆಯಾಗಿದೆ. ಕಾವೇರಿ ನದಿ ಪಾತ್ರದ ನಾಪೋಕ್ಲು ಬಳಿಯ ಬೊಳಿಬಾಣೆ, ದೋಣಿಕಡು ಮೊದಲಾದ ಪ್ರದೇಶಗಳಲ್ಲಿ ಕಾವೇರಿ ಪ್ರವಾಹ ರಸ್ತೆ ಮೇಲೆ ಹರಿಯುತ್ತಿದೆ.

ಭತ್ತದ ಕೃಷಿಗೆ ಹಾನಿ : ವೀರಾಜಪೇಟೆ ತಾಲ್ಲೂಕು ವ್ಯಾಪ್ತಿಯಲ್ಲು ಉತ್ತಮ ಮಳೆಯಾಗುತ್ತಿದ್ದು, ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯುತ್ತಿದೆ. ಜಿಲ್ಲೆಯ ಕಾವೇರಿ, ಲಕ್ಷ್ಮಣತೀರ್ಥ ಸೇರಿದಂತೆ ಕಿರು ತೊರೆಗಳು ಉಕ್ಕಿ ಹರಿದು ನದಿ ಪಾತ್ರದ ಗದ್ದೆಗಳು ಕಳೆದ ಎರಡು ವಾರಗಳಿಂದ ನೀರಿನಿಂದ ಆವೃತ್ತವಾಗಿದ್ದು, ಹಲವೆಡೆಗಳಲ್ಲಿ ಗದ್ದೆಗಳಲ್ಲಿ ನಾಟಿ ಮಾಡಿದ ಭತ್ತದ ಸಸಿಗಳು ಕೊಳೆತು ಹೋಗಿವೆ. ಮಳೆಯೊಂದಿಗ ತೀವ್ರ ಸ್ವರೂಪದ ಗಾಳಿಯ ಹಿನ್ನೆಲೆಯಲ್ಲಿ ಸೋಮವಾರದಂದು ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆ ತಾಲ್ಲೂಕಿನಾದ್ಯಂತ ಹಾಗೂ ಸೋಮವಾರಪೆಟೆ ತಾಲ್ಲೂಕಿನ ಕೆಲವು ಭಾಗಗಳಲ್ಲಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದರು.

ನೀರು ಪೂರೈಕೆಯಲ್ಲಿ ವ್ಯತ್ಯಯ: ಮಡಿಕೇರಿಯಲ್ಲಿ ವಿಪರೀತ ಗಾಳಿ ಮಳೆಯಿಂದಾಗಿ ಎಲ್ಲೆಡೆ ಮರ ಬೀಳುವುದು, ಬರೆ ಜರಿಯುವುದು, ಮನೆ ಕುಸಿತಗಳಂತಹ ಘಟನೆಗಳು ಮರುಕಳಿಸುತ್ತಿದೆ. ಗಾಳಿ, ಮಳೆಯಿಂದಾಗಿ ವಿದ್ಯುತ್ ಸರಬರಾಜು ಇಲ್ಲದೆ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸರಬರಾಜು ಮಾಡಲು, ಪಂಪಿಂಗ್ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ತಿಳಿಸಿದ್ದಾರೆ.

ನಗರಸಭೆ ವ್ಯಾಪ್ತಿಯಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರಾಣಹಾನಿ ತಪ್ಪಿಸಲು ಮರಗಳ ಕೆಳಗೆ, ಬೆಟ್ಟಗುಡ್ಡಗಳ ಮೇಲೆ ಬೆಡ್ಡಗುಡ್ಡಗಳ ಕೆಳಗೆ, ಇಳಿಜಾರು ಪ್ರದೇಶಗಳಲ್ಲಿ ಇರುವ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಸ್ಥಳಾಂತರಗೊಳ್ಳಲು ಅವರು ಮನವಿ ಮಾಡಿದ್ದಾರೆ. ಅಪಾಯದ ಸ್ಥಿತಿಯಲ್ಲಿರುವ ಮನೆಗಳಲ್ಲಿ ವಾಸವಿರದೆ ತಾತ್ಕಾಲಿಕವಾಗಿ ನಗರಸಭೆ ನಿಗಧಿಪಡಿಸಿರುವ ಗಂಜಿ ಕೇಂದ್ರಗಳಲ್ಲಿ ವಾಸ್ತವ್ಯವನ್ನು ಹೂಡುವಂತೆ ಸಲಹೆ ನೀಡಿದ್ದಾರೆ.

See also  ಜಾಧವ್ ರಾಜೀನಾಮೆಯಿಂದ ಯಾವುದೇ ಪರಿಣಾಮ ಇಲ್ಲ: ದಿನೇಶ್ ಗುಂಡೂರಾವ್

ಯಾವುದೇ ಅನಾಹುತ ಬಗ್ಗೆ ನಗರಸಭೆ ಸಹಾಯವಾಣಿ(24*7) ದೂರವಾಣಿ ಸಂಖ್ಯೆ 08272-220111 ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಕಾವೇರಮ್ಮ ಸೋಮಣ್ಣ ಕೋರಿದ್ದಾರೆ.

ಮಳೆ ವಿವರ: ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 74.66 ಮಿ.ಮೀ. ಕಳೆದ ವರ್ಷ ಇದೇ ದಿನ 10.90 ಮಿ.ಮೀ., ಜನವರಿಯಿಂದ ಇಲ್ಲಿಯವರೆಗಿನ ಮಳೆ 2128.45 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 869.95 ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 116.75 ಮಿ.ಮೀ. ಕಳೆದ ವರ್ಷ ಇದೇ ದಿನ 12.10 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2934.36 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1203.40 ಮಿ.ಮೀ. ಮಳೆಯಾಗಿತ್ತು.

ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 42.10 ಮಿ.ಮೀ. ಕಳೆದ ವರ್ಷ ಇದೇ ದಿನ 7.53 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1789.67 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 753.84 ಮಿ.ಮೀ. ಮಳೆಯಾಗಿತ್ತು.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 65.13 ಮಿ.ಮೀ.ಕಳೆದ ವರ್ಷ ಇದೇ ದಿನ 13.07 ಮಿ.ಮೀ ಜನವರಿಯಿಂದ ಇಲ್ಲಿಯವರೆಗಿನ ಮಳೆ 1661.31 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 652.61 ಮಿ.ಮೀ. ಮಳೆಯಾಗಿತ್ತು.

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 120, ನಾಪೋಕ್ಲು 175.20, ಸಂಪಾಜೆ 91.80, ಭಾಗಮಂಡಲ 80, ವಿರಾಜಪೇಟೆ ಕಸಬಾ 46.20, ಹುದಿಕೇರಿ 69, ಶ್ರೀಮಂಗಲ 58.20, ಪೊನ್ನಂಪೇಟೆ 32.20, ಅಮ್ಮತಿ 26, ಬಾಳೆಲೆ 21, ಸೋಮವಾರಪೇಟೆ ಕಸಬಾ 79.40, ಶನಿವಾರಸಂತೆ 42.60, ಶಾಂತಳ್ಳಿ 173.20, ಕೊಡಲಿಪೇಟೆ 28.40, ಕುಶಾಲನಗರ 7, ಸುಂಟಿಕೊಪ್ಪ 60.20 ಮಿ.ಮೀ. ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ : ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2856.60 ಅಡಿಗಳು, ಕಳೆದ ವರ್ಷ ಇದೇ ದಿನ 2837.94 ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 17.60 ಮಿ.ಮೀ. ಕಳೆದ ವರ್ಷ ಇದೇ ದಿನ 4.20 ಮಿ.ಮೀ, ಇಂದಿನ ನೀರಿನ ಒಳಹರಿವು 13029 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 1432 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು ನದಿಗೆ 14335 ಕ್ಯುಸೆಕ್. ನಾಲೆಗೆ 750 ಕ್ಯುಸೆಕ್.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು