ಮಡಿಕೇರಿ: ಪುನರ್ವಸು ಮಳೆಯನ್ನು ಹಿಂಬಾಲಿಸುವ ರೀತಿಯಲ್ಲೇ ಪುಷ್ಯ ಮಳೆಯ ಬಿರುಸು ಕೊಡಗು ಜಿಲ್ಲೆಯನ್ನು ವ್ಯಾಪ್ತಿಸಿದೆ. ಕಳೆದೊಂದು ದಿನದ ಅವಧಿಯಲ್ಲಿನ ಭಾರೀ ಗಾಳಿ ಮಳೆಗೆ ಮತ್ತೊಮ್ಮೆ ಕಾವೇರಿಯ ಒಡಲು ಭರ್ತಿಯಾಗಿ ಭಾಗಮಂಡಲದ ತ್ರಿವೇಣಿ ಸಂಗಮದ ನೀರು ರಸ್ತೆಗಳನ್ನು ಆವರಿಸಿದೆ.
ಕಾವೇರಿಯ ಕ್ಷೇತ್ರ ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ನಿನ್ನೆ ಬೆಳಗ್ಗಿನಿಂದ ಇಂದು ಬೆಳಗ್ಗಿನವರೆಗೆ ಸಾಧಾರಣ 3 ಇಂಚಿನಷ್ಟು ಮಳೆಯಾಗಿದೆಯಾದರೂ, ಮಂಗಳವಾರ ಹಗಲಿನಲ್ಲಿ ಮಳೆಯ ಪ್ರಮಾಣ ಹೆಚ್ಚುವುದರೊಂದಿಗೆ ಕಾವೇರಿಯ ಮಟ್ಟ ಏರಲಾರಂಭಿಸಿದೆ. ಇದರಿಂದ ಭಾಗಮಂಡಲದ ಅಯ್ಯಂಗೇರಿ ರಸ್ತೆಯ ಮೇಲೆ ಪ್ರವಾಹದ ನೀರು ಹರಿಯಲಾರಂಭಿಸಿದ್ದು, ವಾಹನ ಸಂಚಾರ ಕಡಿತಗೊಳ್ಳುವ ಸಾಧ್ಯತೆ ಇದೆ. ಪ್ರಸಕ್ತ ಸಾಲಿನ ಮುಂಗಾರಿನ ಅವಧಿಯಲ್ಲಿ ಇಲ್ಲಿಯವರೆಗೆ ನಾಲ್ಕೈದು ಬಾರಿ ಪ್ರವಾಹವೇರ್ಪಟ್ಟು ಭಾಗಮಂಡಲ ಕ್ಷೇತ್ರಕ್ಕೆ ಸಂಪರ್ಕ ಸಂಪರ್ಕ ಕಡಿತಗೊಂಡಿತ್ತು.
ದೋಣಿಕಡುವು ಗ್ರಾಮಕ್ಕೆ ದೋಣಿ
ಕೊನೆಗೂ ಬೇಂಗೂರು ಗ್ರಾಮಸ್ಥರು ಪ್ರವಾಹ ಪರಿಸ್ಥಿತಿಯಿಂದ ಹೊರ ಬಂದಿದ್ದಾರೆ. ಗ್ರಾಮಕ್ಕೆ ಜಿಲ್ಲಾಡಳಿತ ಹೊಸ ದೋಣಿ ಖರೀದಿಸಿ ತಂದಿದೆ. ಮಂಗಳೂರಿನ ನೇತ್ರಾವತಿ ಬೋಟ್ ನಿರ್ಮಾಣ ಸಂಸ್ಥೆಯಿಂದ 90 ಸಾವಿರ ರೂ. ವೆಚ್ಚದಲ್ಲಿ ಈ ಬೋಟ್ ಖರೀದಿಸಿ ತರಲಾಗಿದೆ. ದೋಣಿ ಸಾಗಾಟಕ್ಕೆ ಸುಮಾರು 30 ಸಾವಿರ ರೂ. ವೆಚ್ಚವಾಗಿದೆ.
ತಮ್ಮೂರಿಗೆ ಬಂದ ಹೊಸ ನಾಡ ದೋಣಿಯನ್ನು ಬೇಂಗೂರು ಗ್ರಾಮಸ್ಥರು ಪೂಜೆ ಮಾಡಿ ಬರಮಾಡಿಕೊಂಡಿದ್ದಾರೆ. ತಡವಾಗಿಯಾದರೂ ಊರಿಗೆ ದೋಣಿ ಬಂತಲ್ಲಾ ಎಂದು ಊರಿನ ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ.