ಚಾಮರಾಜನಗರ: ಇಲ್ಲಿಗೆ ಸಮೀಪದ ಚೆನ್ನಿಪುರದಮೋಳೆ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳೇ ನೆಟ್ಟುಬೆಳೆಸಿದ ಮರರಗಿಡಗಳ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಗಿಡಗಳಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಪತ್ರಕರ್ತರ ಸಂಘದ ನಿರ್ಗಮಿತ ಅಧ್ಯಕ್ಷ ಎಸ್.ಎಂ.ನಂದೀಶ್ ಅವರು ಇಂದಿನ ದಿನಗಳಲ್ಲಿ ಸಿನಿಮಾ ನಟರು ಹಾಗೂ ವೈಯಕ್ತಿಕವಾಗಿ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸುವುದು ಮಾಮೂಲಿಯಾಗಿದ್ದು, ದಿನನಿತ್ಯ ಉಸಿರಾಡಲು ಶುದ್ಧ ಗಾಳಿ ನೀಡಿ ಕೋಟ್ಯಂತರ ಜೀವಿಗಳ ಉಳಿವಿಗೆ ಕಾರಣವಾದ ಮರಗಿಡಗಳನ್ನು ಬೆಳೆಸಿ ಹುಟ್ಟುಹಬ್ಬ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಎಸ್ಡಿಎಂಸಿ ಅವರ ಸಹಕಾರದಿಂದ ಗ್ರಾಮದ ಶಾಲೆಯಲ್ಲಿ 2ನೇ ಬಾರಿಗೆ ಮರಗಿಡಗಳನ್ನು ಬೆಳೆಸಿ ಹುಟ್ಟುಹಬ್ಬ ಆಚರಿಸಿ ಇತರರಿಗೆ ಮಾದರಿಯಾಗಿದ್ದು, ಈ ಮೂಲಕ ಪರಿಸರದ ಮೇಲೆ ಇರುವ ಕಾಳಜಿಯನ್ನು ಪ್ರಾಯೋಗಿಕವಾಗಿ ಕೆಲಸ ಮಾಡಿ ತೋರಿಸುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪರಿಸರವಾದಿ ವೆಂಕಟೇಶ್ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಶಾಲಾ ಮಕ್ಕಳು ವಿಶೇಷ ಕಾಳಜಿ ವಹಿಸಿ ಶಿಕ್ಷಕರು, ಎಸ್ಡಿಎಂಸಿ ಅವರ ಮಾರ್ಗದರ್ಶನದಲ್ಲಿ ಶಾಲೆಯನ್ನು ಹಸಿರು ತೋರಣಗಳಿಂದ ಸಿಂಗರಿಸಿ, ಶಾಲೆಯನ್ನು ಶುಚಿಗೊಳಿಸಿ ಗಿಡಮರಗಳಿಗೆ ದೀಪಲಂಕಾರ ಹೂವಿನ ಆಲಂಕಾರ ಮಾಡಿದ್ದು ನೋಡುಗರ ಕಣ್ಮನ ಸೆಳೆಯುತ್ತಿತ್ತು.