ಕಾರವಾರ: ಅಕ್ಕಿ ಎಲ್ಲಿ ಸಿಗುತ್ತದೆ? ಭತ್ತ ಹೇಗೆ ಹುಟ್ಟುತ್ತದೆ? ಎಂದು ಕೇಳಿದಾಗ ಬಿಗ್ ಬಜಾರ್ನಲ್ಲಿ ಎನ್ನುವಂತಹ ಅನಾಹುತಕಾರಿ ಉತ್ತರ ನೀಡುವ ಪ್ರವೃತ್ತಿ ಇಂದು ಎದುರಾಗಿದ್ದು, ಇಂತಹ ಮಾಹಿತಿ ಮತ್ತು ಜ್ಞಾನವನ್ನು ಸರಿ ಪಡಿಸುವ ಅವಶ್ಯಕತೆ ನಮಗಿದೆ ಎಂದು ಕೈಗಾ ಅಣುಶಕ್ತಿ ಸಹ್ಯಾದ್ರಿ ಕನ್ನಡ ಸಂಘದ ಅಧ್ಯಕ್ಷ ಜೀತೆಂದ್ರ ಕುಮಾರ್ ಅಭಿಪ್ರಾಯಪಟ್ಟರು.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ವಿರ್ಜೆ ಗ್ರಾಮದ ಓಟಿಕುಂಟೆ ಗ್ರಾಮದಲಿ ಸಹ್ಯಾದ್ರಿ ಕನ್ನಡ ಸಂಘದ ವತಿಯಿಂದ ಆಯೋಜಿಸಿದ್ದ ಗದ್ದೆ ನಾಟಿ ಮಾಡಿಸುವ ಮತ್ತು ಕೃಷಿಯ ಸರ್ವ ರೀತಿಯ ಮಾಹಿತಿ, ಕೆಸರು ಗದ್ದೆ ಓಟ ಮೊದಲಾದ ಚಟುವಟಿಕೆ ಸಂದರ್ಭದಲ್ಲಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳಿಂದ ನಮ್ಮ ಮೂಲ ಮತ್ತು ಸಾಂಪ್ರದಾಯಿಕ ವಿಷಯಗಳನ್ನು ಮುಂದಿನ ತಲೆಮಾರಿಗೆ ಪ್ರಾಯೋಗಿಕವಾಗಿ ದಾಟಿಸಬಹುದಾಗಿದೆ. ಇಲ್ಲದಿದ್ದರೆ ಎಲ್ಲಾ ವಸ್ತುಗಳಂತೆ ಬೆಳೆಗಳೂ ಕೂಡಾ ಬಿಗ್ಬಜಾರ್ ಅಥವಾ ದಿನಸಿ ಅಂಗಡಿಯಿಂದಲೇ ತರಲಾಗುತ್ತಿದೆ ಎಂದುಕೊಳ್ಳುವ ಜ್ಞಾನಾರ್ಜನೆಯಾಗುವ ಕಾಲ ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಸುಮಾರು ನೂರು ಜನ ಮಕ್ಕಳು ಮತ್ತು ಮಹಿಳೆಯರು ಭಾಗವಹಿಸಿದ್ದ ಕೃಷಿ ದರ್ಶನ ಪ್ರಾಯೋಗಿಕ ಕಾರ್ಯಕ್ರಮಕ್ಕಾಗಿ, ವಿರ್ಜೆಯ ಓಟಿಕುಂಟೆ ಗ್ರಾಮದ ಕೃಷ್ಣಾ ಅವರ ಗದ್ದೆಯಲ್ಲಿ ಸಹಜ ಕೃಷಿಯ ಪ್ರಾತ್ಯಕ್ಷಿಕತೆಗೆ ವ್ಯವಸ್ಥೆ ಮಾಡಲಾಗಿತ್ತು. ಕೂರಿಗೆ ಹೊಡೆಯುವುದು, ಸಸಿ ಸೂಡು ಮಾಡುವುದು, ನೆಟ್ಟಿ ಮಾಡುವುದು, ಗದ್ದೆ ಸಜ್ಜುಗೊಳಿಸುವುದು ಹೀಗೆ ಹಲವು ವಿಧಧ ಪ್ರಾಯೋಗಿಕ ತರಬೇತಿ ಮತ್ತು ಕೆಸರು ಗದ್ದೆ ಓಟದ ಮೋಜಿನ ಆಟಗಳಿಗೂ ಅವಕಾಶ ಕಲ್ಪಿಸಲಾಗಿತ್ತು.