ಮೈಸೂರು: ಮಂಡ್ಯ ಜಿಲ್ಲೆಯ ತಹಸೀಲ್ದಾರ್ ರನ್ನು ಅಪಹರಣ ಮಾಡಿದ ಘಟನೆ ನಿನ್ನೆ(ಗುರುವಾರ)ರಾತ್ರಿ ನಡೆದಿದ್ದು, ಇಂದು(ಶುಕ್ರವಾರ) ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚಿಕ್ಕವಡ್ಡರಗುಡಿ ಗ್ರಾಮದ ಬಳಿ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ತಹಸೀಲ್ದಾರ್ ಮಹೇಶ್ಚಂದ್ರ ಅಪಹರಣಕ್ಕೊಳಗಾದವರು. ಅವರು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚಿಕ್ಕವಡ್ಡರಗುಡಿ ಗ್ರಾಮದ ಬಳಿ ಅಪಹರಣಕ್ಕೆ ಒಳಗಾಗಿರುವ ಘಟನೆ ನಡೆದಿದೆ. ತಹಸೀಲ್ದಾರ್ ಮಹೇಶ್ಚಂದ್ರ ಅವರು ಕೆ.ಆರ್.ನಗರ ತಾಲೂಕಿನಲ್ಲಿ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲದೆ ಜುಲೈ 25 ರಂದು ಪಕ್ಕದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿಗೆ ವರ್ಗಾವಣೆಗೊಂಡಿದ್ದರು.
ಕೆ.ಆರ್.ನಗರದಲ್ಲಿ ಖಾಸಗಿ ಮನೆಯಲ್ಲಿ ಬಾಡಿಗೆಗಿದ್ದ ಇವರು ಮನೆಯನ್ನು ಖಾಲಿ ಮಾಡಿರಲಿಲ್ಲ. ಅಲ್ಲದೆ ಕೆ.ಆರ್.ಪೇಟೆಯಲ್ಲಿ ಕೆಲಸ ಮಾಡುತ್ತಿದ್ದರೂ ಅಲ್ಲಿ ಮನೆ ಮಾಡದೆ ಕೆ.ಆರ್.ನಗರದಿಂದಲೇ ತಮ್ಮ ಸ್ವಂತ ವಾಹನ ಮಾರುತಿ ಓಮ್ನಿ (ಕೆ.ಎ.41, ಜೆಡ್-1581) ಯಲ್ಲಿ ಹೋಗಿ ಬರುತ್ತಿದ್ದರು.
ಈ ಮಧ್ಯೆ ಗುರುವಾರ ಕೆ.ಆರ್.ಪೇಟೆಯ ತಾಲೂಕು ಕಚೇರಿಯಲ್ಲಿ ಜನಸ್ಪಂದನ ಕಾರ್ಯಕ್ರಮ ಮುಗಿಸಿ ರಾತ್ರಿ ಸುಮಾರು 9.30ರ ಸಮಯದಲ್ಲಿ ತಮ್ಮ ಮಾರುತಿ ಓಮ್ನಿ ಕಾರ್ ನಲ್ಲಿ ಮನೆಗೆ ಬರುತ್ತಿದ್ದ ವೇಳೆ ಕೆ.ಆರ್.ನಗರ ತಾಲೂಕಿನ ಚಿಕ್ಕವಡ್ಡರಗುಡಿ ಗ್ರಾಮದ ಹಾಸನ-ಮೈಸೂರು ಹೆದ್ದಾರಿಯಲ್ಲಿ ಸುಮಾರು 10.25ರ ಸಮಯದಲ್ಲಿ ಮಾರುತಿ ಓಮ್ನಿ ಕಾರ್ ನಿಂದ ಅಪಹರಣ ಮಾಡಲಾಗಿದೆ ಎನ್ನಲಾಗಿದೆ. ಇದಕ್ಕೆ ಪೂರಕ ಎಂಬಂತೆ ಮಾರುತಿ ಓಮ್ನಿ ಕಾರಿನಲ್ಲಿ ತಹಸೀಲ್ದಾರ್ ಅವರು ಕಾರ್ ನ ಹ್ಯಾಂಡ್ ಬ್ರೇಕ್ ಹಾಕಲಾಗಿದೆ, ಕನ್ನಡಕ, ಬ್ಯಾಗ್, ಛತ್ರಿ, ಇದ್ದು ಕಾರ್ ನ ಕೆಳಗೆ ಶರ್ಟ್ನ ಗುಂಡಿಗಳು ಮತ್ತು ಎರಡು ಕಾಲಿನ ಶೂಗಳು ಬಿದ್ದಿದ್ದು, ಅವರನ್ನು ಎಳೆದಾಡಿರುವ ಕುರುಹುಗಳು ಪತ್ತೆಯಾಗಿದೆ.
ಮಾರುತಿ ಓಮ್ನಿ ಕಾರ್ ರಾತ್ರಿಯಿಂದ ರಸ್ತೆ ಬದಿಯಲ್ಲಿ ನಿಂತಿರುವುದನ್ನು ಗಮನಿಸಿದ ಗ್ರಾಮಸ್ಥರೊಬ್ಬರು ಕಾರು ಬಳಿ ಹೋಗಿ ನೋಡಲಾಗಿ ಕಾರ್ ನಲ್ಲಿ ಯಾರು ಇಲ್ಲದಿರುವುದು ಮತ್ತು ಶೂ, ಶರ್ಟ್ ಗುಂಡಿಗಳು ಬಿದ್ದಿರುವುದನ್ನು ನೋಡಿ ಏನೋ ಘಟನೆ ನಡೆದಿದೆ ಎಂದು ತಿಳಿದು ಕೂಡಲೇ ಸಾಲಿಗ್ರಾಮ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಸಾಲಿಗ್ರಾಮ ಸಬ್ ಇನ್ಸ್ ಪೆಕ್ಟರ್ ಮಹೇಶ್ ಮತ್ತು ಪ್ರಭಾರ ತಹಸೀಲ್ದಾರ್ ನಿಖಿತ, ಉಪತಹಸೀಲ್ದಾರ್ ಯಧುಗಿರೀಶ್ ಅವರುಗಳು ಭೇಟಿ ನೀಡಿ ಪರಿಶೀಲಿಸಿದಾಗ ಇದು ಕೆ.ಆರ್.ಪೇಟೆ ತಹಸೀಲ್ದಾರ್ ಮಹೇಶಚಂದ್ರ ಅವರಿಗೆ ಸೇರಿದ ಕಾರು ಎಂಬುದು ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಎಸ್ಪಿ ಅಮಿತ್ ಸಿಂಗ್ ಅವರು ತಮ್ಮ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಶಿಗಿರಿ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದು, ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳವನ್ನು ಕರೆಸಿ ಉನ್ನತಮಟ್ಟದ ತನಿಖೆ ನಡೆಸುತ್ತಿದ್ದಾರೆ.