ಕಾರವಾರ: ರಸ್ತೆಯಲ್ಲಿ ಮದ್ಯಪಾನ ಮಾಡುತ್ತಿದ್ದದ್ದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಹುಬ್ಬಳ್ಳಿ ಮೂಲದ ಪಾನಮತ್ತ 10 ಯುವಕರನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ರವಿವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿಯ ಗೋಪನಕ್ಕೊಪ್ಪದ ದಾನೇಶ ಅಂಗಡಿ, ನಿತೇಶ ಅಂಗಡಿ, ಶಿವಪ್ಪ ನೂಲ್ವಿ, ರವಿಚಂದ್ರ ಪೂಜಾರ, ಪ್ರಶಾಂತ ನಿಡಗುಂದಿ, ರಮೇಶ ಪೂಜಾರ, ದೇವೆಂದ್ರಪ್ಪ ಹಡಪದ, ಯಲ್ಲಪ್ಪ ಮೆಗುಂಡಿ, ನಾಗರಾಜ ಹಿರೇಮಠ ಹಾಗೂ ಸುಳ್ಯ ಗ್ರಾಮದ ಅಶೋಕ ಗಾಣಿಗೇರ ಬಂಧಿತರು.
ಇವರೆಲ್ಲ ಅಂಕೋಲಾದ ವಿಭೂತಿ ಫಾಲ್ಸ್ ಗೆ ಪ್ರವಾಸಕ್ಕೆ ಆಗಮಿಸಿದ್ದರು. ಯುವಕರು ಸುಂಕಸಾಳ ಬಳಿ ವಾಹನವನ್ನು ನಿಲ್ಲಿಸಿಕೊಂಡು ರಸ್ತೆಯಲ್ಲಿಯೇ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಗಸ್ತು ಸಿಬ್ಬಂದಿ ಶ್ರೀಕಾಂತ ರಸ್ತೆಯಲ್ಲಿ ಕುಳಿತು ಮದ್ಯಪಾನ ಮಾಡುತ್ತಿರುವುದರ ಬಗ್ಗೆ ಪ್ರಶ್ನಿಸಿದ್ದಾರೆ. ಇದರಿಂದ ಕುಪಿತಗೊಂಡ ಯುವಕರು ಸಿಬ್ಬಂದಿಯೊಂದಿಗೆ ವಾದಕ್ಕೆ ಇಳಿದಿದ್ದು, ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಬಾಟಲಿಯಿಂದ ಇಬ್ಬರ ಮೇಲು ಹಲ್ಲೆ ನಡೆಸಿದ್ದು, ವಾಹನವನ್ನು ಜಖಂಗೊಳಿಸಿರುವ ಬಗ್ಗೆ ಪೊಲೀಸರು ದೂರಿದ್ದಾರೆ.
ವಿಷಯ ತಿಳಿದು ತಕ್ಷಣ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ 10 ಪಾನಮತ್ತ ಯುವಕರನ್ನು ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಬಂಧಿಸಲಾಗಿದೆ. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.