ಮಡಿಕೇರಿ: ಆಶ್ಲೇಷ ಮಳೆಯ ಆರ್ಭಟ ಕೊಡಗು ಜಿಲ್ಲೆಯಾದ್ಯಂತ ಮುಂದುವರಿದಿದ್ದು, ಮಹಾಮಳೆಗೆ ಜಿಲ್ಲೆಯ ಕಿರುತೊರೆ, ನದಿಗಳು ಉಕ್ಕಿ ಹರಿಯುತ್ತಿವೆ. ಗಾಳಿ ಹೆಚ್ಚಾಗಿರುವುದರಿಂದ ಅನಾಹುತಗಳು ಹೆಚ್ಚಾಗುತ್ತಲೇ ಇದೆ.
ಕಳೆದ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ ಕಾವೇರಿಯ ಕ್ಷೇತ್ರ ಭಾಗಮಂಡಲ, ತಲಕಾವೇರಿಯಲ್ಲಿ ಸರಾಸರಿ 4 ಇಂಚು ಮಳೆ ದಾಖಲಾಗಿದೆ. ಸೋಮವಾರ ಹಗಲಿನಲ್ಲಿ ಮಳೆಯ ಬಿರುಸು ಹೆಚ್ಚಾಗಿ ತ್ರಿವೇಣಿ ಸಂಗಮ ಉಕ್ಕಿ ಹರಿದು ಅಯ್ಯಂಗೇರಿ ಮತ್ತು ಮಡಿಕೇರಿ ರಸ್ತೆಗಳು ಜಲಾವೃತಗೊಂಡಿವೆ. ತುಂಬಿ ಹರಿಯುತ್ತಿರುವ ನೀರಿನ ನಡುವೆಯೇ ವಾಹನ ಮತ್ತು ಜನ ಸಂಚಾರ ಎಂದಿನಂತೆ ಇದೆ. ಮಳೆಯ ಪ್ರಮಾಣ ಹೆಚ್ಚಾಗಿ ಅಪಾಯದ ಪರಿಸ್ಥಿತಿ ಎದುರಾದಲ್ಲಿ ರ್ಯಾಫ್ಟಿಂಗ್ ಅಥವಾ ಬೋಟ್ ವ್ಯವಸ್ಥೆ ಮಾಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ನದಿ ಪಾತ್ರದ ನಾಪೋಕ್ಲು, ಮೂರ್ನಾಡು ಬಲಮುರಿ, ಸಿದ್ದಾಪುರ ವಿಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ವೀರಾಜಪೇಟೆ, ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯ ಬಹುತೇಕ ಭಾಗಗಳಲ್ಲೂ ಧಾರಾಕಾರ ಮಳೆಯಾಗುತ್ತಿದೆ.
ಕಂಬಿಬಾಣೆ ವ್ಯಾಪ್ತಿಯ ಉಪ್ಪುತೋಡು ಗ್ರಾಮದಲ್ಲಿ ಮೂರು ಮನೆಗಳಿಗೆ ಮಳೆ ನೀರು ನುಗ್ಗಿ ವಸ್ತುಗಳು ಹಾನಿಗೀಡಾಗಿವೆ. ಎಡಬಿಡದೆ ಸುರಿದ ಮಳೆಗೆ ತೋಡಿನ ನೀರು ಉಕ್ಕಿ ಹರಿಯಲು ಆರಂಭಿಸಿದ್ದು ಸುತ್ತಮುತ್ತಲಿನ ಮನೆ, ಗದ್ದೆಗಳಿಗೆ ನೀರು ನುಗ್ಗಿದೆ.
ಹಲವೆಡೆ ಬರೆ ಕುಸಿತ: ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ಸುತ್ತಮುತ್ತಲ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವೆಡೆ ಬರೆ ಕುಸಿದಿದ್ದು, ಮನೆಗಳಿಗೆ ಹಾನಿಯಾಗಿದೆ. ಮಡಿಕೇರಿ-ಮಂಗಳೂರು ರಸ್ತೆಯ ಮದೆನಾಡು ಗ್ರಾಮದ ಬಳಿ ರಸ್ತೆಯ ಮೇಲೆ ಭಾರೀ ಪ್ರಮಾಣದ ಬರೆ ಕುಸಿದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಮಣ್ಣು ತೆರವಿನ ಕಾರ್ಯ ಭರದಿಂದ ಸಾಗಿದೆ.
ಮಡಿಕೇರಿಯ ಭಗವತಿ ನಗರದ ನಿವಾಸಿ ಎಂ.ಪಿ.ದಿಲೀಪ್ ಎಂಬವರ ಮನೆಯ ಮೇಲೆ ಸೋಮವಾರ ಬೆಳಗ್ಗೆ ಬರೆ ಕುಸಿದು, ಗೋಡೆಗೆ ಹಾನಿ ಸಂಭವಿಸಿದೆ. ಇಂದಿರಾನಗರದಲ್ಲಿ ಬರೆ ಕುಸಿತದಿಂದ ಆಯಿಷಾ ಎಂಬವರ ಮನೆಗೆ ಭಾಗಶಃ ಹಾನಿಯಾಗಿದೆ. ಕಾನ್ವೆಂಟ್ ಜಂಕ್ಷನ್ ಬಳಿಯೂ ಬರೆ ಕುಸಿದು ಹಾನಿಯಾಗಿದೆ.
ಕೆದಕಲ್ನ ಶ್ರೀಭದ್ರಕಾಳೇಶ್ವರಿ ದೇವಸ್ಥಾನದ ಬಳಿ ರಾಷ್ಟ್ರಿಯ ಹೆದ್ದಾರಿಯ ಒಂದು ಭಾಗ ಕುಸಿಯಲಾರಂಭಿಸಿದ್ದು, ಆತಂಕ ಎದುರಾಗಿದೆ.
ಗಾಳಿಬೀಡು ಗ್ರಾ.ಪಂ.ಯ 2ನೇ ಮೊಣ್ಣಂಗೇರಿ ಗ್ರಾಮಕ್ಕೆ ತೆರಳುವ ರಸ್ತೆಯ ಮೇಲೆ ಭಾರೀ ಗಾತ್ರದ ಬಂಡೆಯೊಂದು ಉರುಳಿ ಬಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ರಾಷ್ಟ್ರೀಯ ಹೆದ್ದಾರಿ ಬಂದ್: ಧಾರಾಕಾರ ಗಾಳಿ ಮಳೆಯಿಂದಾಗಿ ಮದೆನಾಡು ಗ್ರಾಮದ ಬಳಿ ಗುಡ್ಡ ಕುಸಿತವುಂಟಾಗಿ ಮಡಿಕೇರಿ-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಯ ಸಂಪರ್ಕ ಸಂಪೂರ್ಣ ಕಡಿತಗೊಂಡು ಆತಂಕವನ್ನು ಸೃಷ್ಟಿಸಿದೆ.
ಸೋಮವಾರ ಬೆಳಗ್ಗೆ ಗುಡ್ಡ ಕುಸಿತ ಉಂಟಾಗಿದ್ದು, ಬೃಹತ್ ಮಣ್ಣಿನ ರಾಶಿ ರಸ್ತೆಯನ್ನು ಆವರಿಸಿಕೊಂಡ ಕಾರಣ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಸಂಕಷ್ಟದ ಪರಿಸ್ಥಿತಿ ತಲೆದೋರಿದೆ.
ಆರಕ್ಕೂ ಹೆಚ್ಚಿನ ಜೆಸಿಬಿ ಯಂತ್ರಗಳ ಮೂಲಕ ಸಮರೋಪಾದಿಯಲ್ಲಿ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ತೆರವು ಕೆಲಸದ ನಡುವೆಯೇ ಸುರಿಯುತ್ತಿರುವ ಮಳೆಯಿಂದಾಗಿ ಪದೇ ಪದೇ ಗುಡ್ಡದ ಮಣ್ಣು ಕುಸಿದು ರಸ್ತೆಯನ್ನು ಆವರಿಸುತ್ತಿರುವುದು ಕಾರ್ಯಾಚರಣೆಗೆ ಹಿನ್ನಡೆಯನ್ನು ಉಂಟು ಮಾಡಿದೆ.
ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಪತ್ರಿಕೆಯೊಂದಿಗೆ ಮಾತನಾಡಿ, ಹೆದ್ದಾರಿ ಮೇಲೆ ಬಿದ್ದಿರುವ ಮಣ್ಣಿನ ರಾಶಿಯನ್ನು ತೆರವುಗೊಳಿಸುವ ಕಾರ್ಯ ಬಿರುಸಿನಿಂದ ಸಾಗಿದ್ದು, ಕಾರ್ಯಾಚರಣೆ ಪೂರ್ಣಗೊಂಡ ನಂತರ ವಾಹನಗಳ ಸಂಚಾರಕ್ಕೆ ಅವಕಾಶವನ್ನು ನೀಡಲಾಗುವುದೆಂದು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಅಧಿಕಾರಿಗಳ ತಂಡ ಈ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಿದೆ. ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ಆರ್.ಅಶೋಕ್ ಭೇಟಿ: ಸ್ಥಳೀಯ ಪ.ಪಂ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿರುವ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಶಾಸಕ ಕೆ.ಜಿ.ಬೋಪಯ್ಯ, ಎಂಎಲ್ ಸಿ ಸುನಿಲ್ ಸುಬ್ರಮಣಿ ಸೇರಿದಂತೆ ಪಕ್ಷದ ಪ್ರಮುಖರು ಮದೆನಾಡಿಗೆ ಭೇಟಿ ನೀಡಿ, ಗುಡ್ಡ ಕುಸಿತವಾಗಿರುವುದನ್ನು ಪರಿಶೀಲಿಸಿದರು.
ಹಾರಂಗಿ ಒಳಹರಿವಿನಲ್ಲಿ ಹೆಚ್ಚಳ: ಕುಶಾಲನಗರ ಸಮೀಪದ ಹಾರಂಗಿ ಅಣೆಕಟ್ಟು ತಿಂಗಳ ಹಿಂದೆಯೇ ಭರ್ತಿಯಾಗಿದ್ದು, ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಣೆಕಟ್ಟಿನ ಒಳಹರಿವಿನಲ್ಲಿ ಗಣನೀಯ ಹೆಚ್ಚಳ ಉಂಟಾಗಿದೆ. ನೀರನ್ನು ನಾಲ್ಕೂ ಕ್ರಸ್ಟ್ ಗೇಟ್ಗಳಿಂದ ಹರಿಯ ಬಿಡಲಾಗುತ್ತಿದೆ.
ಜಲಾಶಯದ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2857.10 ಅಡಿಗಳು, ಕಳೆದ ವರ್ಷ ಇದೇ ದಿನ 2856.65 ಅಡಿ. ಇಂದು ಹಾರಂಗಿಯಲ್ಲಿ ಬಿದ್ದ ಮಳೆ 57.20 ಮಿ.ಮೀ, ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಇಂದಿನ ನೀರಿನ ಒಳಹರಿವು 24127 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 1645 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು ನದಿಗೆ 19002 ಕ್ಯುಸೆಕ್. ನಾಲೆಗೆ 1000 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನದಿಗೆ 2050 ಕ್ಯುಸೆಕ್. ನಾಲೆಗೆ 1200 ಕ್ಯುಸೆಕ್.
ಮಳೆ ವಿವರ: ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 87.06 ಮಿ.ಮೀ. ಕಳೆದ ವರ್ಷ ಇದೇ ದಿನ 0.05 ಮಿ.ಮೀ., ಜನವರಿಯಿಂದ ಇಲ್ಲಿಯವರೆಗಿನ ಮಳೆ 2970.51 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1368.14 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 115.70 ಮಿ.ಮೀ. ಕಳೆದ ವರ್ಷ ಇದೇ ದಿನ 0.15 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 4204.98 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 0.15 ಮಿ.ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 50.98 ಮಿ.ಮೀ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2302.69 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1103.82 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 94.50 ಮಿ.ಮೀ. ಕಳೆದ ವರ್ಷ ಇದೇ ದಿನ 0.00 ಮಿ.ಮೀ ಜನವರಿಯಿಂದ ಇಲ್ಲಿಯವರೆಗಿನ ಮಳೆ 2403.87 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1046.75 ಮಿ.ಮೀ. ಮಳೆಯಾಗಿತ್ತು.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 137.40, ನಾಪೋಕ್ಲು 73.40, ಸಂಪಾಜೆ 156.60, ಭಾಗಮಂಡಲ 95.40, ವಿರಾಜಪೇಟೆ ಕಸಬಾ 58.20, ಹುದಿಕೇರಿ 83.50, ಶ್ರೀಮಂಗಲ 79.60, ಪೊನ್ನಂಪೇಟೆ 35.60, ಅಮ್ಮತ್ತಿ 25, ಬಾಳೆಲೆ 24, ಸೋಮವಾರಪೇಟೆ ಕಸಬಾ 112.20, ಶನಿವಾರಸಂತೆ 92.20, ಶಾಂತಳ್ಳಿ 191.40, ಕೊಡ್ಲಿಪೇಟೆ 50, ಕುಶಾಲನಗರ 54, ಸುಂಟಿಕೊಪ್ಪ 67.20 ಮಿ.ಮೀ. ಮಳೆಯಾಗಿದೆ.