ಮಡಿಕೇರಿ: ಮಹಾಮಳೆಯಿಂದ ಜಿಲ್ಲೆಯಲ್ಲಿ ಉಂಟಾಗಿರುವ ಅಪಾರ ಪ್ರಮಾಣದ ಹಾನಿಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸುವ ಮೂಲಕ ಸಂಕಷ್ಟಕ್ಕೆ ಒಳಗಾಗಿರುವವರಿಗೆ ತಕ್ಷಣ ಸ್ಪಂದಿಸಬೇಕೆಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರಿಗೆ ಸೂಚನೆ ನೀಡಿದ್ದಾರೆ.
ಸಣ್ಣ ನೀರಾವರಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಅವರ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ಶಾಸಕರುಗಳು ಹಾಗೂ ಇತರ ಜನಪ್ರತಿನಿಗಳು ಕೊಡಗು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಜಿಲ್ಲೆಯ ಶಾಸಕರು ಹಾಗೂ ಜಿಲ್ಲಾಡಳಿತದಿಂದ ಮಾಹಿತಿ ಪಡೆದರು.
ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಜಿಲ್ಲಾಡಳಿತದ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳು ಜಿಲ್ಲೆಗೆ 30 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಹಣ ಮಾತ್ರ ಖರ್ಚಾಗುತ್ತಿಲ್ಲ. ರಸ್ತೆಯನ್ನು ಆಕ್ರಮಿಸಿಕೊಂಡಿರುವ ಮಣ್ಣನ್ನು ತೆರವುಗೊಳಿಸಲು ಜೆಸಿಬಿಗಳೇ ನಮ್ಮಲ್ಲಿ ಇಲ್ಲ. ಜಿಲ್ಲಾಡಳಿತದವರು ಹಿಂದಿನ ಲೆಕ್ಕ ಚುಕ್ತಾ ಮಾಡಿಲ್ಲ ಎಂಬ ಕಾರಣಕ್ಕೆ ಕೆಲಸ ಮಾಡಲು ಜೆಸಿಬಿಗಳು ಹಿಂದೇಟು ಹಾಕುತ್ತಿದ್ದು, ಗ್ರಾಮೀಣ ರಸ್ತೆಗಳ ಸ್ಥಿತಿ ಹೇಳತೀರದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.