ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ನಿರಾಶ್ರಿತರಾಗಿರುವ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲು ಸರ್ಕಾರ ಸ್ಥಾಪಿಸಿರುವ ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರ ಮನೋಬಲ ವೃದ್ಧಿಗಾಗಿ ಮಾನಸಿಕ ತಜ್ಞರು ಹಾಗೂ ಉನ್ನತ ಅಧಿಕಾರಿಗಳ ಸಲಹೆ ಮೇರೆಗೆ ಯೋಗಾಭ್ಯಾಸ ಮತ್ತು ಗ್ರಾಮೀಣ ಸೊಗಡಿನ ಪಾರಂಪರಿಕ ನೃತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಈ ಮೂಲಕ ನೊಂದ ಮನಸುಗಳಿಗೆ ಸಮಾಧಾನ ನೀಡುವ ಕಾರ್ಯವನ್ನು ಜಿಲ್ಲಾಡಳಿತ ಪ್ರಾರಂಭಿಸಿದೆ.
ಯೋಗಾಭ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ : ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಆಸ್ತಿ-ಪಾಸ್ತಿ ನಷ್ಟ, ಜೀವ ಹಾನಿ ಅನುಭವಿಸಿರುವ ಕುಟುಂಬಗಳಲ್ಲಿ ಸದ್ಯ ಮುಂದೇನು ಎಂಬ ಆತಂಕ ಆವರಿಸಿದೆ. ಹೀಗಾಗಿ ಸಂತ್ರಸ್ತರಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಮೂಲಕ ಬದುಕಿನಲ್ಲಿ ಭರವಸೆ ಮೂಡಿಸಲು ಮಾನಸಿಕ ತಜ್ಞರಿಂದ ಸಮಾಲೋಚನೆ ಮಾಡಿಸುವ ಕಾರ್ಯ ಈಗಾಗಲೆ ಕೊಡಗು ಜಿಲ್ಲೆಯ ಪರಿಹಾರ ಕೇಂದ್ರಗಳಲ್ಲಿ ಆರಂಭವಾಗಿದೆ.
ಸದ್ಯ ಜಿಲ್ಲೆಯಲ್ಲಿ 51 ಪರಿಹಾರ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು 6900 ಸಂತ್ರಸ್ತರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಈ ಪೈಕಿ ಪುರುಷರು ಸುಮಾರು 3000 ರಷ್ಟಿದ್ದರೆ, ಮಹಿಳೆಯರ ಸಂಖ್ಯೆ ಸುಮಾರು 3400 ಹಾಗೂ ಮಕ್ಕಳ ಸಂಖ್ಯೆ ಸುಮಾರು 500. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುರುವ ಮಾನಸಿಕ ತಜ್ಞ ವೈದ್ಯರಾದ ಡಾ. ರೂಪೇಶ್ ಗೋಪಾಲ್ ಅವರು ಜೊತೆಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಿಷನ್ ಡೈರೆಕ್ಟರ್ ಆಗಿರುವ ಡಾ. ರತನ್ ಕೇಲ್ಕರ್ ಹಾಗೂ ಹಾಗೂ ಉನ್ನತ ಅಧಿಕಾರಿಗಳ ಸಲಹೆಯಂತೆ ಆಸ್ತಿ-ಪಾಸ್ತಿ ಕಳೆದುಕೊಂಡು ನಿರಾಶ್ರಿತರಾಗಿರುವ ಸಂತ್ರಸ್ತರ ಮನೋಬಲ ವೃದ್ಧಿಗಾಗಿ ಹಾಗೂ ನೊಂದ ಮನಸುಗಳನ್ನು ಶಾಂತಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಪರಿಹಾರ ಕೇಂದ್ರಗಳಲ್ಲಿ ಯೋಗಾಭ್ಯಾಸ ಪ್ರಾರಂಭಿಸಲಾಗಿದೆ.
ಇದರ ಜೊತೆಗೆ ಪರಿಹಾರ ಕೇಂದ್ರಗಳಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಗ್ರಾಮೀಣ ಸೊಗಡಿನ ಪಾರಂಪರಿಕ ನೃತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪರಿಹಾರ ಕೇಂದ್ರಗಳಲ್ಲಿ ಪ್ರೊಜೆಕ್ಟ ರ್ ಗಳ ಮೂಲಕ ಚಲನಚಿತ್ರ ಪ್ರದರ್ಶನ ಕೈಗೊಳ್ಳಲಾಗುತ್ತಿದೆ. ಮಕ್ಕಳಿಗೆ ಆಟಿಕೆ ವಸ್ತುಗಳ ಪೂರೈಕೆ ಮಾಡಲಾಗುತ್ತಿದ್ದು, ನೊಂದ ಪಾಲಕರಿಗೆ ಮಕ್ಕಳಿಂದ ಇನ್ನಷ್ಟು ತೊಂದರೆಯಾಗದಿರಲಿ ಎಂಬುದು ಹಾಗೂ ಮಕ್ಕಳು ಖುಷಿಯಿಂದ ಕಾಲ ಕಳೆಯುವುದನ್ನು ಕಂಡು ಪಾಲಕರ ಮನಸ್ಸು ಕೂಡ ಉಲ್ಲಸಿತಗೊಳ್ಳಲಿದೆ ಎಂಬುದು ಜಿಲ್ಲಾಡಳಿತದ ಸದಾಶಯ.
ಯೋಗಾಭ್ಯಾಸ ನಡೆಸಲು ಯೋಗ ಶಿಕ್ಷಕರ ಬಳಕೆ : ವಿಚಲಿತಗೊಂಡಿರುವ ಮನಸ್ಸನ್ನು ಶಾಂತಗೊಳಿಸಲು, ಸಮಾಧಾನಗೊಳಿಸಲು ಯೋಗ ಒಳ್ಳೆಯ ಮಾರ್ಗವಾಗಿದೆ. ಸಂತ್ರಸ್ತರ ಪರಿಹಾರ ಕೇಂದ್ರಗಳಲ್ಲಿ, ಸಂತ್ರಸ್ತರ ಮನಸ್ಸನ್ನು ಸಮಾಧಾನ ಪಡಿಸುವ ನಿಟ್ಟಿನಲ್ಲಿ 30 ಜನರ ತಂಡ ಕೊಡಗು ಜಿಲ್ಲೆಗೆ ಆಗಮಿಸಿದ್ದು, ಇವರು ಪರಿಹಾರ ಕೇಂದ್ರಗಳಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರಿಗೂ ಯೋಗಾಭ್ಯಾಸ ಪ್ರಾರಂಭಿಸಿದ್ದು, ಸಂತ್ರಸ್ತರು ಯೋಗಾಭ್ಯಾಸಕ್ಕೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಆಸಕ್ತಿಯಿಂದ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಪರಿಹಾರ ಕೇಂದ್ರಗಳಲ್ಲಿ ಕಂಡುಬರುತ್ತಿದೆ.
ಯೋಗಾಭ್ಯಾಸ ಚಟುವಟಿಕೆ ಹಾಗೂ ನೃತ್ಯ, ಸಂಗೀತದಂತಹ ಸೃಜನಶೀಲ ಚಟುವಟಿಕೆಯುಳ್ಳ ಕಾರ್ಯಕ್ರಮಗಳು ಸಂತ್ರಸ್ತರ ಮನಸ್ಸುಗಳನ್ನು ಶಾಂತಗೊಳಿಸಿ, ಬದುಕಿನ ಬಗ್ಗೆ ಭರವಸೆಯ ಹೊಂಗಿರಣ ಮೂಡಿಸಲು ಎನ್ನುವುದು ನಮ್ಮ ಉದ್ದೇಶವಾಗಿದೆ ಎನ್ನುತ್ತಾರೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಿಷನ್ ಡೈರೆಕ್ಟರ್ ಆಗಿರುವ ಡಾ. ರತನ್ ಕೇಲ್ಕರ್ ಅವರು.