ಮಡಿಕೇರಿ: ಯೋಧರ ನಾಡು ಕೊಡಗಿನಲ್ಲಿ ಸಂಭವಿಸಿರುವ ಜಲಪ್ರಳಯದ ಸಂಕಷ್ಟಗಳನ್ನು ಕುದ್ದು ನೋಡುವ ಸಲುವಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಜಿಲ್ಲೆಗೆ ಆಗಮಿಸಿದ್ದು, ಭೀಕರ ಭೂ ಕುಸಿತ ಸಂಛವಿಸಿದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅವರ ಬಳಿ ಆಸ್ತಿಪಾಸ್ತಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಜನರು ತಮ್ಮ ನೋವನ್ನು ತೋಡಿಕೊಂಡರು.
ಕುಶಾಲನಗರ ಮಾರ್ಗವಾಗಿ ಮಾದಾಪುರಕ್ಕೆ ತೆರಳಿದ ಅವರು, ಆ ವ್ಯಾಪ್ತಿಯಲ್ಲಿ ಸಂಭವಿಸಿರುವ ಅನಾಹುತವನ್ನು ಹತ್ತಿರದಿಂದ ವೀಕ್ಷಿಸಿದರು.
ಈ ವೇಳೆ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್ ಅವರು ಜಲಪ್ರಳಯದ ಕುರಿತಂತೆ ಮಾಹಿತಿ ನೀಡಿದರು. ಭಾರಿ ಮಳೆಯಿಂದಾಗಿ ಲಕ್ಷಾಂತರ ಕೋಟಿ ರೂಪಾಯಿ ನಷ್ಟವಾಗಿದ್ದು, 7000 ಜನರನ್ನು ರಕ್ಷಿಸಲಾಗಿದ್ದು, 10 ಜನ ಮೃತಪಟ್ಟಿದ್ದಾರೆಂಬ ಮಾಹಿತಿಯನ್ನು ನೀಡಿದ್ದು, ಕಣ್ಮರೆಯಾಗಿರುವ ಜನರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಕಾರ್ಯಾಚರಣೆ ಭರದಿಂದ ಸಾಗುತ್ತಿರುವ ಬಗ್ಗೆಯೂ ಮಾಹಿತಿ ನೀಡಿದರು.
ಅತಿಹೆಚ್ಚು ಭೂಕುಸಿತ ಉಂಟಾಗಿರುವ ಹಟ್ಟಿಹೊಳೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ರಕ್ಷಣಾ ಸಚಿವರು ಅಲ್ಲಿನ ಜನರ ಸಂಕಷ್ಟವನ್ನು ಆಲಿಸಿದರು. ಈ ವೇಳೆ ಕಾಫಿ ಬೆಳೆಗಾರರೊಬ್ಬರು ಇಲ್ಲಿ ಸಮಸ್ಯೆ ತಪ್ಪಿದಲ್ಲ ಆದ್ದರಿಂದ ಗ್ರಾಮಗಳ ಜನರನ್ನು ಸ್ಥಳಾಂತರ ಮಾಡುವಂತೆ ಕೋರಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಶಾಸಕ ಕೆ.ಜಿ.ಬೋಪಯ್ಯ ಅವರು, ಯಾವುದೇ ಕಾರಣಕ್ಕೂ ಗ್ರಾಮಗಳ ಸ್ಥಳಾಂತರ ಮಾಡುವ ಮಾತುಬೇಡ ಎಂದಾಗ ಮಾತಿನ ಚಕಮಕಿಯೂ ನಡೆಯಿತು. ಇದೆಲ್ಲವನ್ನು ಗಮನಿಸಿದ ರಕ್ಷಣಾ ಸಚಿವರು ಮಣ್ಣಿನಡಿ ಸಿಕ್ಕಿರುವ ಜನರ ಮೃತ ದೇಹ ಹೊರತೆಗೆಯುವ ಮತ್ತು ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡುವ, ಗುಡ್ಡ ಕುಸಿತ ತೆರವು ಕಾರ್ಯವನ್ನು ಮುಂದುವರಿಸುವಂತೆ ಸೇನಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ನಡುವೆ ಕೊಡಗಿನಲ್ಲಿ ಆಗಿರುವ ಭೂ ಕುಸಿತ ಮತ್ತು ಅದರಿಂದಾಗಿರುವ ಅನಾಹುತ, ಮನೆ, ತೋಟ ಕಳೆದುಕೊಂಡು ನಿರ್ಗತಿಕರಾಗಿರುವ ಜನರ ಬಗ್ಗೆ ಮುಂದೆ ತೆಗೆದುಕೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ.
ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿದ ಸಚಿವರು ಸಂಪೂರ್ಣ ಮಾಹಿತಿ ಪಡೆದುಕೊಂಡು ಅಗತ್ಯವಾಗಿ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆಯೂ ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ನಡೆದ ಭೀಕರತೆಯ ಬಗ್ಗೆ ಅದರಿಂದಾದ ನಷ್ಟಗಳ ಕುರಿತಂತೆ ಜಿಲ್ಲಾಧಿಕಾರಿ ಶ್ರೀವಿದ್ಯಾರವರು ಮಾಹಿತಿ ನೀಡಿದ್ದಾರೆ.