News Kannada
Tuesday, November 29 2022

ಕರ್ನಾಟಕ

ಜಲಪ್ರಳಯವಾದ ಊರಲ್ಲೀಗ ಸೂತಕದ ಕಳೆ - 1 min read

Photo Credit :

ಜಲಪ್ರಳಯವಾದ ಊರಲ್ಲೀಗ ಸೂತಕದ ಕಳೆ

ಹಾಸನ: ಬೆಟ್ಟ ಸಾಲಿನ ದಾರಿಯುದ್ದಕ್ಕೂ ಸಾಲು ಸಾಲು ಎದೆ ನಡುಗಿಸುವ ಭೂಕುಸಿತಗಳು. ರಸ್ತೆಯ ಮಧ್ಯೆ ರುಂಡ ಮುಂಡ ಬೇರ್ಪಡಿಸಿಕೊಂಡು ತುಂಡರಿಸಿ ಬಿದ್ದ ಮರ, ಗಿಡ, ಬಳ್ಳಿಗಳು. ತೋಟದ ಕೆಲ ಭಾಗಗಳೇ ಕಳಚಿ ಬಿದ್ದು, ಮಿಕ್ಕರ್ಧ ಈಗಲೋ ಆಗಲೋ ಬೀಳಲು ಕಾದಿರುವಂತೆ ಬಾಯ್ಬಿಟ್ಟು ನಿಂತ ಪರಿ ನೋಡಿಯೇ ದಿಗಿಲು ಹುಟ್ಟುತ್ತದೆ. ಬಿದ್ದ ರಾಶಿಯೂ ಹೊಲ ಗದ್ದೆಗಳ ಮೇಲೆ ಎತ್ತರದ ರಾಶಿಯಾಗಿ ಬಿದ್ದು ಮುಂದೆಂದೂ ಅಲ್ಲಿ ಏನೂ ಬೆಳೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂತಹ ಸ್ಥಿತಿಯಲ್ಲಿ ಹಸಿರುಭೂಮಿ ಪ್ರತಿಷ್ಠಾನದ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಕಂಡು ಬಂದ ದೃಶ್ಯಗಳನ್ನು ಇಲ್ಲಿ ವಿವರಿಸಲಾಗಿದೆ.

ಸಕಲೇಶಪುರ ತಾಲೂಕಿನ ಕೆಲ ಭಾಗಗಳಿಗೆ ಭೇಟಿಯಾಗಲು ಹೊರಟಾಗ ದಾರಿಯುದ್ದಕ್ಕೂ ಕಂಡ ಭೂಕುಸಿತದ ದೃಶ್ಯ, ಬೃಹತ್ ಯಂತ್ರಗಳು ರಸ್ತೆಗೆ ಬಿದ್ದ ಅವಶೇಷಗಳನ್ನು ತಮ್ಮ ರಾಕ್ಷಸಾಕಾರದ ಬಾಯಿಂದ ಮೊಗೆದು ಪಕ್ಕಕ್ಕೆ ಹಾಕಿ ರಸ್ತೆ ತೆರವುಗೊಳಿಸುತ್ತಿದ್ದ ಕೆಲಸಗಳನ್ನು ಕಾಣುವಾಗ ಈ ಬಾರಿ ಎರಡು ತಿಂಗಳಿನಿಂದ ಸುರಿದ ಜಡಿಮಳೆ ತಂದಿಡುತ್ತಿರುವ ಹೊಸ ಸಮಸ್ಯೆಗಳಿಗೆ ಹಲವಾರು ಉದಾಹರಣೆಗಳನ್ನು ನೀಡುತ್ತಿತ್ತು.

ಬಿಸಲೆ ಘಾಟಿಯ ಮೂಲಕ ಸುಬ್ರಹ್ಮಣ್ಯಕ್ಕೆ ಸಾಗುವ ಮಾರ್ಗ ಮಧ್ಯೆ, ಅತ್ಯಂತ ಎತ್ತರದಿಂದ ಬಿದ್ದಿರುವ ದೊಡ್ಡ ಪ್ರಮಾಣದ ಭೂಕುಸಿತದಿಂದ ಚಿಕ್ಕದೊಂದು ಸೇತುವೆ ಮತ್ತು ಕಿಲೋಮೀಟರ್‍ ಗಟ್ಟಲೇ ಉದ್ದದ ಕಾಂಕ್ರೀಟ್ ರಸ್ತೆ ನಿರ್ನಾಮವಾಗಿದೆ. ಈ ಭೂಕುಸಿತ ಸಂಭವಿಸಿರುವ ಜಾಗದಲ್ಲಿ ಮನೆ, ತೋಟಗಳಿಲ್ಲದಿರುವುದರಿಂದ ಜೀವ ಹಾನಿಯಾಗಲೀ, ಆಸ್ತಪಾಸ್ತಿಗೆ ಹಾನಿಯಾಗಲೀ ಆಗಿಲ್ಲ. ಮತ್ತು ಅಷ್ಟೆತ್ತರದಿಂದ ರಭಸವಾಗಿ ಬೆಟ್ಟದ ಮೇಲೆಲ್ಲೋ ಶೇಖರಿಸಿಟ್ಟ ಮಳೆನೀರು ಧುಮ್ಮಿಕ್ಕುವಾಗ ತನ್ನೊಡನೆ ಬುಡ ಸಹಿತ ಕಿತ್ತು ತಂದ ಬೃಹದಾಕಾರದ ಮರ, ಕಲ್ಲುಬಂಡೆ, ರಾಶಿ ಮಣ್ಣನ್ನು ಹೊತ್ತು ತಂದು ದೊಡ್ಡ ಕಣಿವೆಯನ್ನೇ ನಿರ್ಮಾಣ ಮಾಡಿದೆ. ತೊರೆಯಿಲ್ಲದ ಜಾಗದಲ್ಲೂ ರಭಸವಾಗಿ ನೀರು ಹರಿಯಲು ದಾರಿ ಮಾಡಿಕೊಂಡಿದೆ. ರಸ್ತೆಯ ಮೇಲೂ ಅದರ ಅವಶೇಷಗಳ ರಾಶಿ ಹಾಕಿಟ್ಟಿದೆ. ರಿಪೇರಿಯಿರಲಿ, ಮತ್ತೆಂದಿಗೂ ಹೊಸದಾಗಿ ಇಲ್ಲಿ ರಸ್ತೆಯೊಂದನ್ನು ನಿರ್ಮಿಸಬಹುದೆಂಬ ಬಗ್ಗೆಯೇ ಈ ಭೀಕರ ಭೂಕುಸಿತ ಅನುಮಾನ ಹುಟ್ಟಿಸುವಂತಿದೆ ಎಂದು ಸ್ಥಳೀಯ ಪರಿಸರ ಪರ ಹೋರಾಟಗಾರರಾದ ಗೊದ್ದು ಉಮೇಶ್ ಅವರು ವಿವರಿಸಿದ್ದಾರೆ.

ಅತ್ಯಂತ ದೊಡ್ಡ ಪ್ರಮಾಣದ ಭೂಕುಸಿತ ಸಂಭವಿಸಿರುವ ಹಿಜ್ಜನಹಳ್ಳಿಯಲ್ಲಿ ಆತಂಕದ ಛಾಯೆ ಆವರಿಸಿದೆ. ಕೆಂಚಮ್ಮನ ಹೊಸಕೋಟೆಯ ಮೂಲಕ ಸೋಮವಾರಪೇಟೆಗೆ ತೆರಳುವ ಮಾರ್ಗ ಮಧ್ಯದ ರಸ್ತೆಯ ಹಿಜ್ಜನಹಳ್ಳಿ ಬಳಿ ಅಪಾರ ಪ್ರಮಾಣದ ಭೂಕುಸಿತ ಎತ್ತರದ ಪ್ರದೇಶದಿಂದ ಆಗಿದ್ದು, ಮಳೆ ನೀರಿನ ರಭಸದೊಂದಿಗೆ ಮರಗಳು, ಕಲ್ಲುಬಂಡೆಗಳು, ಮಣ್ಣು, ಸೇರಿಕೊಂಡು ಬಿದ್ದ ರಭಸಕ್ಕೆ ಹೊಸದಾಗಿ ನಿರ್ಮಿಸಿದ್ದ ರಸ್ತೆಯೇ ಕಿಲೋಮೀಟರ್ ಆಚೆಗೂ ಜರಿದು ಬಿದ್ದಿದೆ. ಆ ಮೂಲಕ ಭೂಮಿ ಇಬ್ಭಾಗವಾಗಿ, ದೊಡ್ಡ ಪ್ರಮಾಣದ ಕಂದಕವೇರ್ಪಟ್ಟಿದೆ. ಜೊತೆಗೆ ಭೂಕುಸಿತವು ಎಕರೆಗಳಷ್ಟು ಕಾಫಿ ತೋಟವನ್ನೂ ನುಂಗಿ, ಎಲ್ಲವೂ ಸೇರಿ ಕಣಿವೆಯ ಹೊಲ, ಗದ್ದೆಗಳಲ್ಲಿ ಹತ್ತದಿನೈದು ಅಡಿಗಳಷ್ಟು ಎತ್ತರದಲ್ಲಿ ಬಿದ್ದು ಮತ್ತೆಂದಿಗೂ ಕೃಷಿ ಮಾಡಲಾಗದ ಸ್ಥಿತಿ ತಲುಪಿದೆ. ಈ ಭೀಕರ ಭೂಕುಸಿತ ಸಂಭವಿಸಿದ ಅಕ್ಕಪಕ್ಕದ ಭೂಮಿ ಮತ್ತು ಮನೆಗಳೂ ಬಿರುಕು ಬಿಟ್ಟಿದ್ದು, ಕಂದರದ ಕಡೆಗೆ ಭೂಮಿ ವಾಲಿರುವುದರಿಂದ ಹಿಜ್ಜನಹಳ್ಳಿಯ ಸುತ್ತಮುತ್ತಲ ಹಳ್ಳಿಗಳ ಜನರು ಹಳ್ಳಿಗಳಲ್ಲಿ ವಾಸಿಸಲು ಆತಂಕಪಡುತ್ತಿದ್ದು, ಅವರೆಲ್ಲರಿಗೆ ತಾತ್ಕಾಲಿಕವಾಗಿ ಪಕ್ಕದ ಮಾಗೇರಿಯ ಸರ್ಕಾರಿ ಶಾಲೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಎಕರೆಗಟ್ಟಲೆ, ಕೃಷಿಭೂಮಿ, ಕಾಫಿ ತೋಟ ಕಳೆದುಕೊಂಡಿರುವ ಜನರು, ಯಾವ ಕ್ಷಣ ಏನು ಸಂಭವಿಸುತ್ತದೆಯೋ ಎಂಬ ಆತಂಕದಲ್ಲಿ ಇನ್ನೂ ಕೂಡ ಜನ ಜೀವ ಹಿಡಿದಿಟ್ಟುಕೊಂಡು ಬದುಕುತ್ತಿರುವುದು ಕಂಡು ಬಂದಿದೆ.

See also  ಉತ್ತರಕನ್ನಡ ಜಿಲ್ಲೆಯಲ್ಲಿ 251 ಪೊಲೀಸರಿಗೆ ಕೊರೋನಾ ಸೋಂಕು ದೃಢ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು