ಮಡಿಕೇರಿ: ಕೊಡಗಿನಲ್ಲಿ ಮಹಾಮಳೆಯಿಂದ ಭೂಕುಸಿತ ಉಂಟಾಗಿ ಮೃತಪಟ್ಟವರ ಶೋಧ ಕಾರ್ಯ ತೀವ್ರಗೊಂಡಿದ್ದು, ಮಂಗಳವಾರ ಮತ್ತೊಂದು ಮೃತದೇಹ ಪತ್ತೆಯಾಗಿದೆ.
ಮಾದಾಪುರ ಸಮೀಪದ ಮೂವತ್ತೊಕ್ಲು ಗ್ರಾಮದಿಂದ ನಾಪತ್ತೆಯಾಗಿದ್ದ ಮುಕ್ಕಾಟಿರ ಸಾಬು ಉತ್ತಪ್ಪ(62) ಎಂಬವರ ಮೃತದೇಹವನ್ನು ಪತ್ತೆ ಮಾಡುವಲ್ಲಿ ರಕ್ಷಣಾ ತಂಡಗಳು ಯಶಸ್ವಿಯಾಗಿವೆ.
ಮೂವತ್ತೊಕ್ಲು ಗ್ರಾಮದಲ್ಲಿ ಮಣ್ಣಿನಡಿ ಹುದುಗಿ ಹೋಗಿದ್ದ ಸಾಬು ಅವರ ಮೃತದೇಹವನ್ನು ಕುಟ್ಟ ಪೊಲೀಸ್ ವೃತ್ತದ ಇನ್ಸ್ ಪೆಕ್ಟರ್ ಪಿ.ಕೆ.ರಾಜು ನೇತೃತ್ವದ ಗರುಡ ತಂಡ ಹಾಗೂ ಪೊಲೀಸ್ ಶ್ವಾನದಳದ ತಂಡಗಳು ಮಂಗಳವಾರ ಪತ್ತೆ ಮಾಡಿವೆ. ಸಾಬು ಉತ್ತಪ್ಪ ಅವರ ಮೃತದೇಹಕ್ಕಾಗಿ ಕಳೆದ ನಾಲ್ಕೈದು ದಿನಗಳಿಂದ ಪೊಲೀಸ್ ಸೇರಿದಂತೆ ವಿವಿಧ ರಕ್ಷಣಾ ತಂಡಗಳು ಹಾಗೂ ಸ್ಥಳೀಯರು ಕೂಡಾ ತೀವ್ರ ಶೋಧ ನಡೆಸಿದ್ದರು. ಕೊನೆಗೂ ಮಂಗಳವಾರ ಅವರ ಮೃತದೇಹ ಪತ್ತೆಯಾಗಿದೆ.
ಉಳಿದಂತೆ ನಾಪತ್ತೆಯಾಗಿರುವ ಕಾಟಗೇರಿಯ ಗಿಲ್ಬರ್ಟ್ ಮೆಂಡೋನ್ಸ(59) ಹೆಬ್ಬಾಲೆಯ ನಿವೃತ್ತ ಸೈನಿಕ ಹರೀಶ್ ಕುಮಾರ್(42) ಹಾಗೂ ಜೋಡುಪಾಲದ ನಿವಾಸಿ ಸೋಮಣ್ಣ ಎಂಬವರ ಪುತ್ರಿ ಮಂಜುಳಾ (15) ಅವರುಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.