ಕಾರವಾರ: ಹೆರಿಗೆ ನೋವಿನಿಂದ ಅಂಕೋಲಾ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿರುವ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ವೈದ್ಯರು ಮಾಹಿತಿ ನೀಡಿದ್ದಾರೆ.
ಕಾರವಾರ ತಾಲೂಕಿನ ತೋಡೂರ ಗ್ರಾಮದ ವನಿತಾ ರಮೇಶ ಆಗೇರ(26) ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ. ಈಕೆ ಸಹಜ ಪ್ರಸೂತಿಯಿಂದಲೇ ಎರಡು ಗಂಡು ಹಾಗೂ ಒಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ಮೂರೂ ಮಕ್ಕಳು ಹಾಗೂ ತಾಯಿ ಆರೋಗ್ಯವಂತರಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಡಾ. ಆಶಾ ಭಟ್, ಇದು ಕ್ಲಿಷ್ಟಕರವಾದ ಪ್ರಸೂತಿಯಾಗಿತ್ತು. ಸುಮಾರು 6 ರಿಂದ 7 ಸಾವಿರ ಪ್ರಸೂತಿ ಪ್ರಕರಣಗಳಲ್ಲಿ ಒಂದು ಇಂತಹ ತ್ರಿವಳಿ ಮಕ್ಕಳ ಪ್ರಕರಣ ಪತ್ತೆಯಾಗುತ್ತದೆ.ಇಂಥ ಪ್ರಕರಣದಲ್ಲಿ ಶಿಶುಗಳು ಆರೋಗ್ಯವಾಗಿರುವುದು ಕಡಿಮೆ. ಜನನವಾದ ಮಕ್ಕಳು ಆರೋಗ್ಯಯುತವಾಗಿರುವುದು ವಿಶೇಷ ಎಂದರು.