ಕೋಲಾರ: ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದ್ದ ಮಾಲೂರು ವಿದ್ಯಾರ್ಥಿನಿಯ ಕೊಲೆ ಹಾಗೂ ಅತ್ಯಾಚಾರ ಯತ್ನ ಪ್ರಕರಣವನ್ನು ಕೃತ್ಯ ನಡೆದ 45 ದಿನಗಳಲ್ಲಿ ಇತ್ಯರ್ಥಗೊಳಿಸಿರುವ ಇಲ್ಲಿನ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿ ಟಿ.ಎನ್.ಸುರೇಶ್ ಬಾಬು ಉರುಫ್ ಸೂರಿಗೆ (25) ಶನಿವಾರ ಗಲ್ಲು ಶಿಕ್ಷೆ ವಿಧಿಸಿದೆ.
ಆ. 1ರಂದು ವಿದ್ಯಾರ್ಥಿನಿಯ ಕೊಲೆಯಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮಾಲೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಳಿಕ 23 ದಿನದಲ್ಲಿ ತನಿಖೆ ಪೂರ್ಣಗೊಳಿಸಿದ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ನಂತರ ನ್ಯಾಯಾಲಯ 22 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿತ್ತು. ಸುರೇಶ್ ಬಾಬು ವಿರುದ್ಧ ಆರೋಪ ಸಾಬೀತಾಗಿದ್ದು, ಆತ ದೋಷಿ ಎಂದು ನ್ಯಾಯಾಧೀಶೆ ಬಿ.ಎಸ್.ರೇಖಾ ಅವರು ಶನಿವಾರ ಪ್ರಕಟಿಸಿದರು.
ನಿರ್ಭಯಾ ಪ್ರಕರಣ ಉಲ್ಲೇಖ: ‘ನಿರ್ಭಯಾ ಪ್ರಕರಣದಷ್ಟೇ ಮಾಲೂರು ಪ್ರಕರಣವೂ ಗಂಭೀರವಾದುದು. ಇಲ್ಲಿ ಸಂತ್ರಸ್ತೆಯ ಅಥವಾ ಆಪಾದಿತನ ವಯಸ್ಸು ಮುಖ್ಯವಲ್ಲ. ಕೃತ್ಯದ ಕ್ರೂರತ್ವ ಆಧರಿಸಿ ಆಪಾದಿತನಿಗೆ ಗಲ್ಲು ಶಿಕ್ಷೆ ನೀಡಲಾಗಿದೆ’ ಎಂದು ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಒಂದೇ ದಿನ ಎರಡು ಗಲ್ಲು
ಮಾಲೂರು ತಾಲ್ಲೂಕಿನ ಮಾಸ್ತಿ ಠಾಣೆ ವ್ಯಾಪ್ತಿಯ ನಟವನಹಳ್ಳಿ ಕ್ರಾಸ್ ಬಳಿ 2014ರ ಜುಲೈ 2ರಂದು 10ನೇ ತರಗತಿ ವಿದ್ಯಾರ್ಥಿನಿಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುನಿಕೃಷ್ಣ (23), ಅನಿಲ್ ಕುಮಾರ್ (20), ನಾರಾಯಣಸ್ವಾಮಿ (22) ಮತ್ತು ಕೃಷ್ಣಮೂರ್ತಿ (20) ಎಂಬುವರಿಗೆ ನ್ಯಾಯಾಧೀಶೆ ರೇಖಾ ಅವರು ಶನಿವಾರವೇ ಗಲ್ಲು ಶಿಕ್ಷೆ ವಿಧಿಸಿದರು.